ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಕಳೆದ ರಾತ್ರಿ ಬಿಜೆಪಿ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಆಕಾಂಕ್ಷಿಗಳ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ವಂಚಿತರು ತಿರುಗಿ ಬಿದ್ದಿದ್ದು ಮುಂದಿನ ನಿರ್ಧಾರ ಕೈಗೊಳ್ಳುವ ಸಲುವಾಗಿ ಬೆಂಬಲಿಗರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸುತ್ತಿದ್ದಾರೆ.
ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಈಗಾಗಲೇ ಘೋಷಿಸಿದ್ದು, ಈ ಚುನಾವಣೆಯಲ್ಲಿ ಕಣಕ್ಕಿಳಿಯುವುದು ನಿಶ್ಚಿತ. ಪಕ್ಷೇತರ ಅಥವಾ ಇತರೆ ಪಕ್ಷಗಳಿಂದ ಎಂಬುದರ ಕುರಿತು ಯಾವುದೇ ತೀರ್ಮಾನವಾಗಿಲ್ಲ ಎಂದಿದ್ದಾರೆ.
ಬಹಳಷ್ಟು ಕ್ಷೇತ್ರಗಳಲ್ಲಿ ಇದೇ ಪರಿಸ್ಥಿತಿ ಇದ್ದು, ಇದರ ಮಧ್ಯೆ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸೈಲೆಂಟ್ ಸುನಿಲ್ ಹಾಗೂ ಸುನಿಲ್ ವೆಂಕಟೇಶ್ ಅವರಿಗೆ ನಿರಾಸೆಯಾಗಿದೆ. ಈ ಕ್ಷೇತ್ರದಿಂದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ಘೋಷಣೆಯಾಗಿದ್ದು, ಹೀಗಾಗಿ ಸೈಲೆಂಟ್ ಸುನಿಲ್ ಹಾಗೂ ಸುನಿಲ್ ವೆಂಕಟೇಶ್ ಬೆಂಬಲಿಗರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಜೊತೆ ವಾಗ್ವಾದವೂ ನಡೆದಿದೆ.