ಕೋಲ್ಕತ್ತಾ: ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವೆಯಲ್ಲಿನ ಕೊರತೆಯಿಂದ ಮೃತಪಟ್ಟ 37 ವರ್ಷದ ಇಂಜಿನಿಯರ್ ಕುಟುಂಬಕ್ಕೆ 60 ಲಕ್ಷ ರೂ. ಪರಿಹಾರ ನೀಡುವಂತೆ ಕೋಲ್ಕತ್ತಾ ಮೂಲದ ಖಾಸಗಿ ಆಸ್ಪತ್ರೆ ಮತ್ತು ಇಬ್ಬರು ವೈದ್ಯರಿಗೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಆರು ವಾರಗಳಲ್ಲಿ ಮೊತ್ತ ಪಾವತಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ವುಡ್‌ಲ್ಯಾಂಡ್ಸ್ ಮೆಡಿಕಲ್ ಕೇರ್ ಲಿಮಿಟೆಡ್‌ಗೆ 30 ಲಕ್ಷ ರೂ. ಪಾವತಿಸಲು ಸೂಚಿಸಲಾಗಿದ್ದು, ಉಳಿದ ಮೊತ್ತವನ್ನು ಇಬ್ಬರು ವೈದ್ಯರಾದ ಆಂಕೊಲಾಜಿಸ್ಟ್ ಡಾ. ರಾಜೇಶ್ ಜಿಂದಾಲ್ ಮತ್ತು ಅರಿವಳಿಕೆ ತಜ್ಞ ಡಾ. ಸನಯ್ ಪಟ್ವಾರಿ ಪಾವತಿಸುವಂತೆ ಸೂಚಿಸಲಾಗಿದೆ. ಮೃತರ ಕುಟುಂಬಕ್ಕೆ ದಾವೆ ಶುಲ್ಕವಾಗಿ 2 ಲಕ್ಷ ರೂ.ಗಳನ್ನು ಆಸ್ಪತ್ರೆ ಪಾವತಿಸಬೇಕಾಗುತ್ತದೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕುಂತಲ್ ಚೌಧರಿ ಅವರ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ಅವರ ಪತ್ನಿ ಮತ್ತು ಅಪ್ರಾಪ್ತ ಪುತ್ರ ಎನ್‌ಸಿಡಿಆರ್‌ಸಿ ಮುಂದೆ 3.1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ದೂರು ಸಲ್ಲಿಸಿದ್ದರು.
ಚೌಧರಿ ಅವರು ಜೂನ್ 11, 2008 ರವರೆಗೆ ವುಡ್‌ಲ್ಯಾಂಡ್ಸ್‌ನಲ್ಲಿ ಆಸ್ಪತ್ರೆಯಲ್ಲಿ ಮೂರು ಕೀಮೋ ಥೆರಪಿಗಳನ್ನು ಪೂರ್ಣಗೊಳಿಸಿದ್ದರು. ಫೆಬ್ರವರಿ 17, 2008 ರಂದು ಮತ್ತೆ ವೈದ್ಯರನ್ನು ಸಂಪರ್ಕಿಸಿದರು. ವೈದ್ಯರ ಸಲಹೆಯಂತೆ ಜೂನ್ 18 ರಂದು ಆಸ್ಪತ್ರೆಗೆ ದಾಖಲಾದ್ರು. ವೈದ್ಯರ ಸಣ್ಣ ತಪ್ಪಿನಿಂದಾಗಿ ರೋಗಿಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕೂಡಲೇ ಅವರನ್ನು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ರೋಗಿಯ ಸ್ಥಿತಿಯು ಕ್ಷೀಣಿಸುತ್ತಿರುವುದರಿಂದ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದು ಮುಂಬೈ ವೈದ್ಯರು ಹೇಳಿದ್ರು. ಜೂನ್ 24, 2008 ರಂದು, ಅವರನ್ನು ಕೋಲ್ಕತ್ತಾದ ಬೆಲ್ಲೆ ವ್ಯೂ ಕ್ಲಿನಿಕ್‌ಗೆ ಸ್ಥಳಾಂತರಿಸಲಾಯಿತು. ರೋಗಿಯು ಅದೇ ವರ್ಷ ಜುಲೈ 9 ರಂದು ನಿಧನರಾದರು.