alex Certify BIG NEWS: BJP ನಾಯಕರಿಗೆ 13 ಪ್ರಶ್ನೆ ಮುಂದಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: BJP ನಾಯಕರಿಗೆ 13 ಪ್ರಶ್ನೆ ಮುಂದಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಹಾಲು ಉತ್ಪಾದಕ ರೈತರ ಬೆನ್ನೆಲುಬನ್ನು ಮುರಿಯಲು ಹೊರಟಿದೆ. ಈ ಬಗ್ಗೆ ನಾನು 2020 ರಿಂದ ಹೇಳುತ್ತ ಬಂದಿದ್ದು, ಸರ್ಕಾರಕ್ಕೆ ಪತ್ರಗಳನ್ನು ಬರೆದು ಎಚ್ಚರಿಸಿದ್ದೇನೆ. ಸದನದಲ್ಲಿ ಪ್ರಸ್ತಾಪಿಸಿದ್ದೇನೆ ಆದರೂ ಬಿಜೆಪಿ ಸರ್ಕಾರ ನಿರ್ಲಕ್ಷ ಧೋರಣೆ ಅನುಸರಿಸಿದ್ದು ರೈತರನ್ನು ಶತ್ರುಗಳಂತೆ ಪರಿಗಣಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ಕರ್ನಾಟಕದ ಗ್ರಾಮೀಣ ಭಾಗದ ಹೆಣ್ಣುಮಕ್ಕಳು 1-2 ಹಸುಗಳನ್ನು ಸಾಕಿ ತಮ್ಮ ಕುಟುಂಬಗಳನ್ನು ನಿಭಾಯಿಸುತ್ತಿದ್ದಾರೆ. ಇದರ ಮೇಲೆ ಈಗ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಅದಾನಿ ಹಾಗೂ ಅಂಬಾನಿಗಳ ಕಣ್ಣು ಬಿದ್ದಿದೆ. ಅಮಿತ್‍ಶಾ ಅವರು ರಾಜ್ಯಗಳಲ್ಲಿರುವ ಹಾಲು ಮಹಾಮಂಡಳಿಗಳನ್ನು ಒಗ್ಗೂಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು ಅದರ ಭಾಗವಾಗಿ ಈಗ ರಾಜ್ಯಕ್ಕೆ ಅಮುಲ್ ವಕ್ಕರಿಸಿಕೊಂಡಿದೆ. ಈಗ ನಂದಿನಿ ಆತಂಕ ಎದುರಿಸುತ್ತಿದೆ. ಮೋದಿ ಮತ್ತು ಅಮಿತ್ ಶಾ ನಮ್ಮ ನಂದಿನಿ ಮುಳುಗಿಸಲು ಯೋಜನೆ ಹಾಕಿಕೊಂಡಿರುವಂತೆ ಕಾಣಿಸುತ್ತಿದೆ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಬಿಜೆಪಿಯವರು ಗುಜರಾತಿನ ಅದಾನಿ, ಅಂಬಾನಿಗಳ ಹಿತಾಸಕ್ತಿಯ ಪರವಾಗಿ ನಿಂತು ರಾಜ್ಯದ ರೈತರ ಮೇಲೆ ಯುದ್ಧ ಸಾರಿದ್ದಾರೆ. ಅದಕ್ಕಾಗಿಯೆ ನಂದಿನಿ ಉತ್ಪನ್ನಗಳ ಮೇಲೆ ದಾಳಿ ನಡೆಸಲು ತಾವೆ ಅಮುಲ್ ರಾಯಭಾರಿಗಳಾಗಿದ್ದಾರೆ. ಬಿಜೆಪಿಗರ ರಾಷ್ಟ್ರಪ್ರೇಮವೆಂದರೆ ಅದು ಅದಾನಿ, ಅಂಬಾನಿ ಮತ್ತು ಗುಜರಾತಿನ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ಪ್ರೇಮ. ಕರ್ನಾಟಕದ ಎಲ್ಲಾ ಬಿಜೆಪಿಯವರು ನಾಡದ್ರೋಹಿಗಳಾಗಿ ಪರಿವರ್ತನೆಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರು ಪಶುಪಾಲಕರ ಪರವಾಗಿದ್ದರೆ ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಸಿದ್ದರಾಮಯ್ಯ ಸಾಲು ಸಾಲು ಪ್ರಶ್ನೆ ಮುಂದಿಟ್ಟಿದ್ದಾರೆ.

1. ಹಿಂಡಿ ಮತ್ತಿತರ ಪಶು ಆಹಾರಗಳ ಮೇಲೆ ವಿಧಿಸುತ್ತಿರುವ ಜಿಎಸ್‍ಟಿಯನ್ನು ಯಾಕೆ ರದ್ದು ಮಾಡಿಲ್ಲ?

2. ರಾಜ್ಯ ಸರ್ಕಾರವೆ ನನಗೆ ನೀಡಿರುವ ಮಾಹಿತಿ ಪ್ರಕಾರ 2019 ರಲ್ಲಿ 1 ಕೋಟಿ 29 ಲಕ್ಷ ಇದ್ದ ಜಾನುವಾರುಗಳು 2022ರ ಡಿಸೆಂಬರ್ ವೇಳೆಗೆ 1.15 ಕೋಟಿಗೆ ಇಳಿಕೆಯಾಗಿವೆ. ಹಾಗಿದ್ದರೆ 14 ಲಕ್ಷ ರಾಸುಗಳು ಎಲ್ಲಿ ಹೋದವು? ಜಾನುವಾರು ಹತ್ಯಾ ನಿಷೇಧ ಕಾಯ್ದೆಯ ಕಾರಣಕ್ಕಾಗಿ ನಿಮ್ಮ ಕಿರುಕುಳದಿಂದ ರೈತರು ತಮ್ಮ ಹಸುಗಳನ್ನೆಲ್ಲ ಮಾರಿಬಿಟ್ಟರೆ?

3. 2014 ರಲ್ಲಿ 45 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, 2017ರ ಕೊನೆಯ ವೇಳೆಗೆ 73 ಲಕ್ಷ ಲೀಟರ್‍ಗೆ ಏರಿಕೆಯಾಗಿತು? ಇದರಿಂದಾಗಿ ಶೇ.61 ರಷ್ಟು ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಯಾಕೆ 71 ಲಕ್ಷ ಲೀಟರ್‍ಗಳಿಗೆ ಇಳಿಕೆಯಾಗಿದೆ?

4. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿ ಲೀಟರ್ ಹಾಲಿಗೆ ಕೊಡುವ ಪ್ರೋತ್ಸಾಹಧನವನ್ನು 5 ರೂಪಾಯಿಗೆ ಏರಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾಕೆ ಒಂದು ರೂಪಾಯಿಯನ್ನೂ ಹೆಚ್ಚು ಮಾಡಲಿಲ್ಲ?

5. ನಮ್ಮ ಸರ್ಕಾರ ಇದ್ದಾಗ ವರ್ಷಕ್ಕೆ 1356 ಕೋಟಿಗೂ ಹೆಚ್ಚು ಹಣವನ್ನು ಹಾಲಿನ ಪ್ರೋತ್ಸಾಹಧನವಾಗಿ ರೈತರಿಗೆ ಕೊಡುತ್ತಿದ್ದೆವು. ಆದರೆ ಬೊಮ್ಮಾಯಿ ಸರ್ಕಾರ 1200 ಕೋಟಿಯಷ್ಟನ್ನೂ ಕೊಡುತ್ತಿಲ್ಲ ಯಾಕೆ?

6. ನಾವು ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡುತ್ತಿದ್ದೆವು. ಇದರಿಂದಾಗಿ ಮಕ್ಕಳ ಅನಿಮಿಯಾ ಪ್ರಮಾಣ ಕಡಿಮೆಯಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನಿಮಿಯಾ ಪ್ರಮಾಣ ಕಡಿಮೆಯಾಗುವ ಬದಲು ಶೇ.65.5 ಕ್ಕೆ ಏರಿಕೆಯಾಗಿದೆಯೆಂದು ಮೋದಿ ಸರ್ಕಾರವೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ ಈ ಪ್ರಮಾಣದಲ್ಲಿ ಅನಿಮಿಯಾ ಜಾಸ್ತಿಯಾಗಲು ಕಾರಣ ಏನು? ಬೊಮ್ಮಾಯಿ ಸರ್ಕಾರ ಮಕ್ಕಳಿಗೆ ಹಾಲು ಕೊಡುವುದನ್ನು ನಿಲ್ಲಿಸಿರುವುದು ಏಕೆ? ಮಕ್ಕಳ ಹಾಲಿಗೆ ಬಿಡುಗಡೆ ಮಾಡಬೇಕಾದ ಅನುದಾನವನ್ನು ನಿಲ್ಲಿಸಿರುವುದು ಏಕೆ?

7. ಮಕ್ಕಳು ಕುಡಿಯುವ ಹಾಲಿಗೆ, ರೈತರಿಗೆ ನೀಡುವ ಪ್ರೋತ್ಸಾಹಧನಕ್ಕೆ ಹಣ ಇಲ್ಲ ಎಂದಾದರೆ ಆರೆಸ್ಸೆಸ್ ಅಂಗ ಸಂಸ್ಥೆಗಳಾದ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ಚಾಣುಕ್ಯ ವಿಶ್ವವಿದ್ಯಾಲಯ ಮುಂತಾದವುಗಳಿಗೆ ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು, ಗೋಮಾಳಗಳನ್ನು ಕೇವಲ ಕೆಲವೆ ಕೋಟಿರೂಗಳಿಗೆ ನೀಡಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದು ಏಕೆ?

8. ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿರುವ ಅಮೃತ್ ಮಹಲ್ ಕಾವಲುಗಳನ್ನು ಡಿನೋಟಿಫೈ ಮಾಡಿ ಖಾಸಗಿಯವರಿಗೆ ನೀಡಿ ಜಾನುವಾರುಗಳಿಗೆ ಮೇವಿಲ್ಲದಂತೆ ಮಾಡಿದ್ದು ಏಕೆ?

9. ನಮ್ಮ ಸರ್ಕಾರದ ಅವಧಿಯಲ್ಲಿ 30 ಕೆಜಿ ಚೀಲದ ಹಿಂಡಿಗೆ 400ರೂ ಬೆಲೆ ಇದ್ದದ್ದು ಈಗ 1450 ರೂ ಆಗಿದ್ದು ಏಕೆ? 450ರೂ ಇದ್ದ ಬೂಸದ ಬೆಲೆ 1400 ರೂಗೆ ಏರಿಕೆಯಾಗಿದ್ದಕ್ಕೆ ಕಾರಣ ಏನು? 650ರೂ ಇದ್ದ ಪಶು ಆಹಾರ 1250ರೂ ಆಗಲು ಯಾರು ಕಾರಣ?

10. ಲಕ್ಷಾಂತರ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಬಂದಿದೆ. ಇದರಿಂದಾಗಿ ಪ್ರತಿ ದಿನ ಸುಮಾರು 10 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಹಾಲು ಕರೆಯುವ ರೈತರು ಅನುಭವಿಸುತ್ತಿದ್ದಾರೆ. ಇವರಿಗೆ ಪರಿಹಾರ ಕೊಡಿ ಎಂದು ನಾನು ಬೆಳಗಾವಿ ಅಧಿವೇಶನದಲ್ಲಿ ಒತ್ತಾಯ ಮಾಡಿದ್ದೆ. ಆದರೂ ಬಿಜೆಪಿ ಸರ್ಕಾರ ಯಾಕೆ ಪರಿಹಾರ ನೀಡಲಿಲ್ಲ?

11. ರಾಜ್ಯ ಸರ್ಕಾರ ನನಗೆ ನೀಡಿರುವ ಮಾಹಿತಿ ಪ್ರಕಾರ 157ಕ್ಕೂ ಹೆಚ್ಚು ಗೋಶಾಲೆಗಳು ರಾಜ್ಯದಲ್ಲಿವೆ. ಆದರೆ ಬಹುಪಾಲು ಗೋಶಾಲೆಗಳಲ್ಲಿ 10-20 ಗಂಡು ಕರುಗಳಿದ್ದರೆ 100-200ಹಸುಗಳಿವೆ. ಹಾಗಿದ್ದರೆ ಹುಟ್ಟಿದ ಗಂಡುಕರುಗಳೆಲ್ಲ ಎಲ್ಲಿ ಹೋದವು? ಸರ್ಕಾರ ಈ ಗೋಶಾಲೆಗಳಿಗೆ ಕೋಟ್ಯಾಂತರ ಅನುದಾನ ನೀಡುತ್ತಿದೆ, ಆದರೆ ಅಲ್ಲಿ ಹುಟ್ಟುವ ಕರುಗಳ, ಜಾನುವಾರುಗಳ ಆಡಿಟ್ ಮಾಡದೆ ಇರಲು ಕಾರಣ ಏನು?

12. ಕೆಎಂಎಫ್‍ನಲ್ಲಿ ನೇಮಕಾತಿಗಳನ್ನು ಮಾಡಲು ರಾಜ್ಯ ಬಿಜೆಪಿ ಸರ್ಕಾರ ಗುಜರಾತ್ ಮೂಲದ ಕಂಪೆನಿಗೆ ನೀಡಿರುವುದೇಕೆ? ಆ ಕಂಪೆನಿಗೆ ನೀಡುವಂತೆ ಒತ್ತಡ ಹೇರಿದ್ದು ಯಾರು?

13. ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಶುಪಾಲಕರಿಗೆ ಯಾಕೆ ಯಾವ ಯೋಜನೆಯನ್ನೂ ನೀಡಲಿಲ್ಲ? ಹಿಂದೆ ಇದ್ದ ಯೋಜನೆಗಳನ್ನೂ ಮುಂದುವರೆಸುತ್ತಿಲ್ಲ. ಹಾಗಿದ್ದರೆ ಗೋವಿನ ಬಗ್ಗೆ ಅವುಗಳನ್ನು ಸಾಕುತ್ತಿರುವ ಶೇ.30 ರಷ್ಟಿರುವ ರೈತರ ಬಗ್ಗೆ ನಿಮ್ಮ ಕಾಳಜಿ ಏನು? ಎಂಬ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ನೀಡಬೇಕು ಮತ್ತು ತಾವು ಬಾಯಿಮಾತಿನ ಗೋ ಪ್ರೇಮಿಗಳೆ ಹೊರತು ಪ್ರಾಮಾಣಿಕ ಕಾಳಜಿ ಇರುವವರಲ್ಲ ಎಂದು ಒಪ್ಪಿಕೊಳ್ಳಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...