ರೋಗ ನಿಯಂತ್ರಣ ಮತ್ತು ಅಂಗಾಂಗ ಕಸಿ ವಿಷಯದಲ್ಲಿ ವೈದ್ಯಕೀಯ ಕ್ಷೇತ್ರವು ಪ್ರಪಂಚದಾದ್ಯಂತ ಮಹತ್ತರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಆಯಿಲ್ ಎಕ್ಸ್‌ಪೆಲ್ಲರ್ ಯಂತ್ರದಲ್ಲಿ ಸಿಲುಕಿ ಫೆಬ್ರವರಿ 23 ರಂದು ಸಂಪೂರ್ಣವಾಗಿ ಬೇರ್ಪಟ್ಟ 10 ವರ್ಷದ ಬಾಲಕಿಯ ಬಲಗೈಯನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಮರು ಜೋಡಿಸಲಾಗಿದೆ.
ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ವೈದ್ಯರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ನಿಗೋಹಾ ಗ್ರಾಮದ ನಿವಾಸಿಯಾಗಿರುವ ಬಾಲಕಿಯ ಭುಜದಿಂದ ತೋಳು ತುಂಡಾಗಿದ್ದು, ಆಕೆಯ ಕುಟುಂಬದವರು ಕೂಡಲೇ ಪಿಜಿಐನ ಅಪೆಕ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದರು. ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರ ತಂಡ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಯ್ತು.
ಬಾಲಕಿಯ ಅಗತ್ಯ ಪರೀಕ್ಷೆಗಳನ್ನು ನಡೆಸಿದ ನಂತರ, ತಕ್ಷಣವೇ ಆಪರೇಷನ್ ಥಿಯೇಟರ್ ಗೆ ಸ್ಥಳಾಂತರಿಸಲಾಯಿತು. ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆಗೆ ತಯಾರಿ ಆರಂಭಿಸಿದರು. ಮೈಕ್ರೋವಾಸ್ಕುಲರ್ ಸರ್ಜರಿ ನಡೆಸಲಾಯಿತು. ಶಸ್ತ್ರಚಿಕಿತ್ಸೆಯಲ್ಲಿ ಸಾಕಷ್ಟು ರಕ್ತ ಹೋಗಿದ್ದರಿಂದ ಬಾಲಕಿಗೆ ಮೂರು ಯೂನಿಟ್ ರಕ್ತ ನೀಡಲಾಗಿದೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ, ಬಾಲಕಿಯ ತೋಳನ್ನು ಪ್ರತಿದಿನ ನಿಯಮಿತವಾಗಿ ಪರೀಕ್ಷಿಸಲಾಯಿತು. ಕೆಲವು ದಿನಗಳ ನಂತರ ಆಕೆಯನ್ನು ಡಿಸ್ಚಾರ್ಜ್ ಮಾಡಲಾಯಿತು. 48 ಗಂಟೆಗಳ ಕಾಲ ಐಸಿಯುನಲ್ಲಿಯೇ ಬಾಲಕಿ ಇದ್ದಳು. ಪ್ರಸ್ತುತ, ಬಾಲಕಿಯ ಬಲಗೈ ಮತ್ತೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ತಿಳಿದು ಬಂದಿದೆ.
ದೇಹದ ಒಂದು ಭಾಗವು ಕತ್ತರಿಸಲ್ಪಟ್ಟಾಗ, ತಕ್ಷಣವೇ ಈ ಹಂತಗಳನ್ನು ಅನುಸರಿಸಿ:
– ಮೊದಲು, ಕತ್ತರಿಸಿದ ಭಾಗವನ್ನು ಶುದ್ಧವಾದ ಬಟ್ಟೆಯಲ್ಲಿ ಸುತ್ತಿ ಮತ್ತು ತಕ್ಷಣ ಅದನ್ನು ಐಸ್ ನೀರಿನಲ್ಲಿ ಮುಳುಗಿಸಿ.
– ಸ್ವಚ್ಛವಾದ ಬಟ್ಟೆಯನ್ನು ಕಟ್ಟಿಕೊಳ್ಳಿ ಅಥವಾ ಅಂಗಚ್ಛೇದನ ಸಂಭವಿಸಿದ ದೇಹದ ಭಾಗವನ್ನು ಡ್ರೆಸ್ಸಿಂಗ್ ಮಾಡಿ.
– ಹಿಂದಿನ ಹಂತಗಳನ್ನು ನಡೆಸಿದ ನಂತರ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ. ಯಾವ ಆಸ್ಪತ್ರೆಗಳಲ್ಲಿ ಕಸಿ ಸೌಲಭ್ಯ ಲಭ್ಯವಿರುತ್ತದೆ ಎಂದು ಸರಿಯಾಗಿ ತಿಳಿದುಕೊಂಡಿರಿ.
– ಅಪಘಾತದ ನಂತರ 6-8 ಗಂಟೆಗಳ ಕಾಲ ಕತ್ತರಿಸಿದ ಅಂಗವನ್ನು ಮರುಜೋಡಿಸಲು ಸಾಧ್ಯವಾಗುತ್ತದೆ.