ತುಮಕೂರು: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ವರುಣಾದಲ್ಲಿ ಸ್ಪರ್ಧಿಸುತ್ತೇನೆ ಎಂದು ಯಾರು ಹೇಳಿದ್ದು? ಆ ರೀತಿ ಯಾವುದೂ ಇಲ್ಲ ಎಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಚಿವ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಪಕ್ಷದ ವರಿಷ್ಠರಿಗೆ ಇದು ಒಂದು ರೀತಿಯ ಪ್ರತಿಷ್ಠಿತ ಚುನಾವಣೆಯಾಗಿದೆ. ಯಾರನ್ನು ಎಲ್ಲಿ ಕಣಕ್ಕಿಳಿಸಬೇಕು ಎಂಬುದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಇನ್ನೊಂದು ಗಂಟೆಯಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಒಂದು ಕುಟುಂಬಕ್ಕೆ ಎರಡು ಟಿಕೆಟ್ ಇಲ್ಲ. ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಬಿಟ್ಟು ಕೊಟ್ಟಿದ್ದಾರೆ. ಕಾರಜೋಳ, ಎಂಟಿಬಿ ನಾಗರಾಜ್ ಸೇರಿದಂತೆ ಐದಾರು ಜನ ಇದ್ದಾರೆ ಎಂದರು.
ಗೆಲ್ಲಲು ಸಾಧ್ಯತೆ ಇರುವ ಕ್ಷೇತ್ರಗಳೆಲ್ಲ ಕಾಂಗ್ರೆಸ್ ತೆಕ್ಕೆಯಲ್ಲಿವೆ. ನನ್ನ ಮಗನಿಗೆ ಟಿಕೆಟ್ ಕೊಟ್ಟರೆ ಮುಖಂಡರೆಲ್ಲ ಕೆಲಸ ಮಾಡುತ್ತಾರೆ. ಪುತ್ರನಿಗೆ ಕೊಟ್ಟರೆ ಸಂತೋಷ, ಕೊಡದೆ ಹೋದರೂ ತೊಂದರೆ ಇಲ್ಲ. ಯಾವತ್ತೂ ಕೂಡ ಚುನಾವಣೆ ಇದೆ ಎಂದು ನಾನು ಕೆಲಸ ಮಾಡಿಲ್ಲ. ಸಿದ್ದಗಂಗಾ ಮಠ ಭೇಟಿಗೂ ಟಿಕೆಟ್ ಯಾವುದೇ ಸಂಬಂಧವಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.