ಮೈಸೂರು: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ಬಂಡಿಪುರದಲ್ಲಿ 15 ಕಿಲೋಮೀಟರ್ ಸಫಾರಿ ನಡೆಸಲಿದ್ದಾರೆ.
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸಸ್ಥಾನವಾದ ಚಾಮರಾಜನಗರ ಜಿಲ್ಲೆ ಬಂಡಿಪುರ ಹುಲಿ ಯೋಜನೆಗೆ 50 ವರ್ಷ ತುಂಬಿದೆ. ಈ ಹಿನ್ನಲೆ ಮೋದಿ ಹುಲಿ ರಕ್ಷಿತಾರಣ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬಂಡಿಪುರದಲ್ಲಿ ಭಾನುವಾರ ಹುಲಿ ಸಫಾರಿ ನಡೆಸಲಿರುವ ಮೋದಿ ಅರಣ್ಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಮೈಸೂರಿನಲ್ಲಿ ನಡೆಯುವ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಮೋದಿ ಭೇಟಿ ಹಿನ್ನೆಲೆ ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಬಂಡಿಪುರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇಂದು ರಾತ್ರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಿಗ್ಗೆ 6.30 ಹೆಲಿಕಾಪ್ಟರ್ ಮೂಲಕ ಬಂಡಿಪುರಕ್ಕೆ ತೆರಳಲ್ಲಿದ್ದಾರೆ. ಸಫಾರಿ ನಡೆಸಲಿರುವ ಅವರು ನಂತರ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದ ಕಾಡಿನ ಆನೆ ಕ್ಯಾಂಪ್ ಗೆ ಭೇಟಿ ನೀಡಲಿದ್ದಾರೆ.
ಅನಾಥ ಆನೆ ಮರಿಗಳ ರಕ್ಷಣಾ ಕಾರ್ಯದಲ್ಲಿ ನಿರತರಾದ ಆಸ್ಕರ್ ಪ್ರಶಸ್ತಿ ವಿಜೇತ ‘ಎಲಿಫೆಂಟ್ ವಿಸ್ಪರರ್ಸ್’ ಸಿನಿಮಾದ ನೈಜ ಪಾತ್ರಧಾರಿ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಭೇಟಿ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ವಾಪಸ್ಸಾಗಲಿದ್ದು, ಕರ್ನಾಟಕ ರಾಜ್ಯ ಮುಕ್ತ ವಿವಿ ಕಾರ್ಟಿಕೋತ್ಸವ ಭವನದಲ್ಲಿ ನಡೆಯುವ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ವಿಶೇಷ ವಿಮಾನದಲ್ಲಿ ವಾಪಸ್ ತೆರಳಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಶುಕ್ರವಾರ ಸಂಜೆ 4 ರಿಂದಲೇ ಬಂಡಿಪುರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಶನಿವಾರ ಸಂಜೆ 4 ರಿಂದ ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೆ ತಮಿಳುನಾಡಿಗೆ ಸಂಪರ್ಕಿಸುವ ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ಓಡಾಟ ಬಂದ್ ಮಾಡಲಾಗಿದೆ.
ಏಪ್ರಿಲ್ 6ರಿಂದಲೇ ಸಫಾರಿ, ರೆಸಾರ್ಟ್, ಹೋಂ ಸ್ಟೇ ಗಳಲ್ಲಿ ಪ್ರವಾಸಿಗರ ವಾಸ್ತವ್ಯ ನಿಷೇಧಿಸಲಾಗಿದ್ದು, ಎಲ್ಲಾ ರೀತಿಯ ಡ್ರೋಣ್ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಧಾನಿ ಮೋದಿ ಅರಣ್ಯ ಇಲಾಖೆ ಜೀಪಿನಲ್ಲಿ ಬಂಡಿಪುರದಲ್ಲಿ 15 ಕಿ.ಮೀ ಸಫಾರಿ ನಡೆಸಲಿದ್ದಾರೆ.