ಮೈಸೂರು: ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣಗೆ ಜೆಡಿಎಸ್ ಬೆಂಬಲ ಬಹುತೇಕ ಖಚಿತವಾಗಿದ್ದು, ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ದಳಪತಿಗಳು ತೀರ್ಮಾನಿಸಿದ್ದಾರೆ.
ನಂಜನಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ, ದಿ.ಆರ್.ಧ್ರುವನಾರಾಯಣ ಮಕ್ಕಳು ಅನಾಥರಾಗಿದ್ದಾರೆ. ಧ್ರುವನಾರಯಣ ಇಬ್ಬರು ಮಕ್ಕಳು ಲವ-ಕುಶ ರೀತಿ ಕಾಣುತ್ತಿದ್ದಾರೆ. ತಂದೆ ಕಳೆದುಕೊಂಡ ನೋವು ಇರುವಾಗಲೇ ತಾಯಿಯನ್ನೂ ಕಳೆದುಕೊಂಡಿದ್ದಾರೆ. ಇಂತಹ ದುಃಖದಲ್ಲಿರುವವರ ಎದುರು ಸ್ಪರ್ಧಿಸಲು ಮನಸ್ಸು ಬರುತ್ತಿಲ್ಲ ಎಂದು ಹೇಳಿದರು.
ಹೀಗಾಗಿ ಸ್ಪರ್ಧೆ ಮಾಡಬೇಕಾ ಬೇಡ್ವಾ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಸ್ವತಃ ಕುಮಾರಸ್ವಾಮಿಯವರೇ ದರ್ಶನ್ ಅವರಿಗೆ ಸಾಂತ್ವನ ಹೇಳಿ ತೀರ್ಮಾನ ಪ್ರಕಟಿಸುತ್ತಾರೆ ಎಂದು ತಿಳಿಸಿದರು.