ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಮೊದಲ ಪಟ್ಟಿ ಪ್ರಕಟಿಸಿರುವ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಆದರೆ ಬಿಜೆಪಿ ಮಾತ್ರ ಇನ್ನೂ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.
ಇದರ ಮಧ್ಯೆ ಸಚಿವರಾಗಿದ್ದ ಉಮೇಶ್ ಕತ್ತಿ ಪ್ರತಿನಿಧಿಸುತ್ತಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವನ್ನು ಕತ್ತಿ ಕುಟುಂಬದವರೇ ತೀರ್ಮಾನಿಸಲಿ ಎಂಬ ಅಭಿಪ್ರಾಯವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಹೃದಯಾಘಾತದಿಂದ ಉಮೇಶ್ ಕತ್ತಿ ನಿಧನರಾದ ಬಳಿಕ ಅವರ ಕುಟುಂಬದವರಿಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದು, ಆದರೆ ಉಮೇಶ್ ಕತ್ತಿಯವರ ಪುತ್ರ ನಿಖಿಲ್ ಗೆ ಟಿಕೆಟ್ ನೀಡಬೇಕೋ ಅಥವಾ ಉಮೇಶ್ ಕತ್ತಿಯವರ ಸಹೋದರ ರಮೇಶ್ ಕತ್ತಿ ಅವರಿಗೆ ನೀಡಬೇಕೋ ಎಂಬ ಗೊಂದಲ ಕಾಡುತ್ತಿದೆ. ಹೀಗಾಗಿ ಈ ವಿಚಾರವನ್ನು ಕತ್ತಿ ಕುಟುಂಬದವರೇ ತೀರ್ಮಾನಿಸಲಿ ಎಂಬ ನಿಲುವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ ಎನ್ನಲಾಗಿದೆ.