alex Certify ಶಿಕ್ಷಣದ `ಬೆಳ್ಳಿ ಮೋಡ’ ದಿಂದ ಇಳಿದು ಬಂದ ನಲಿಕಲಿ ಮಿನುಗು ತಾರೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಣದ `ಬೆಳ್ಳಿ ಮೋಡ’ ದಿಂದ ಇಳಿದು ಬಂದ ನಲಿಕಲಿ ಮಿನುಗು ತಾರೆಯರು

ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಿಕ್ಷಕಿಯರ ಗುಂಪೊಂದು ಶಿಕ್ಷಣ ಇಲಾಖೆಯ ಚೌಕಟ್ಟಿನಲ್ಲಿಯೇ ಹುಟ್ಟಿಕೊಂಡು ಮಕ್ಕಳ ಶೈಕ್ಷಣಿಕ ಮತ್ತು ಶಾಲೆಗಳ ಗುಣಮಟ್ಟ ಹೆಚ್ಚಳಕ್ಕಾಗಿ ನಲಿ-ಕಲಿ ಕ್ರಿಯಾಶೀಲ ತಾರೆಯರ ಗುಂಪೊಂದನ್ನು ರಚಿಸಿಕೊಂಡು ಎಲೆಮರೆಯ ಕಾಯಿಯಂತೆ ಅದ್ಭುತ ಕೆಲಸಗಳನ್ನ ಮಾಡುತ್ತಿದೆ.

ಕೊರೊನಾ ಸಂದರ್ಭದಲ್ಲಿ ಹುಟ್ಟಿಕೊಂಡ ಈ ತಾರೆಯರ ಗುಂಪು ವಾಟ್ಸಾಪ್ ಗ್ರೂಪಿನಿಂದ ವೆಬಿನಾರ್ ಮೂಲಕ ಶಿಕ್ಷಣವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡು ಸಮುದಾಯದತ್ತ ಶಾಲೆಗಳನ್ನು ತೆಗೆದುಕೊಂಡ ಯಶೋಗಾಥೆ ಇದು.

ನಲಿಕಲಿ ಕ್ರಿಯಾಶೀಲ ತಾರೆಯರು ಎಂಬ ಹೆಸರಿನ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಶಿಕ್ಷಕಿಯರ ತಂಡ ಇಂದು ಮಕ್ಕಳ ಆಟ-ಪಾಠ, ಊಟ-ನೋಟ, ಕಲೆ-ಚಿತ್ರಕಲೆ, ಹಸಿರು-ಆರೋಗ್ಯದ ಜೊತೆಗೆ ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಸಹ ದಾನಿಗಳ ಸಹಾಯದಿಂದ ಪಡೆದು ಇಡೀ ಶಾಲೆಯ ವಾತಾವರಣವನ್ನೇ ಬದಲಾಯಿಸುವ ಮಟ್ಟಿಗೆ ಬೆಳೆದುನಿಂತಿರುವುದು ಒಂದು ರೋಚಕ ವಿಷಯವಾಗಿದೆ.

ಕೋವಿಡ್ ಸಂದರ್ಭದಲ್ಲಿ ಮಕ್ಕಳೂ ಶಿಕ್ಷಣದಿಂದ ಆಟಪಾಠದಿಂದ ಹಿಂದೆ ಉಳಿಯುತ್ತಿರುವುದನ್ನು ಮನಗಂಡ ಸರ್ಕಾರಿ ಕಿರಿಯ ಪ್ರಾಧಮಿಕ ಶಾಲಾ ಶಿಕ್ಷಕಿಯರು, ಶಿಕ್ಷಕಿ ಫೌಜಿಯಾ ಸರಾವತ್ ಅವರ ನೇತೃತ್ವದಲ್ಲಿ ಒಂದು ಸೃಜನಶೀಲ ತಂಡವನ್ನು 2020ರ ಏಪ್ರಿಲ್ 4ರಂದು ರಚಿಸಿಕೊಳ್ಳುತ್ತಾರೆ. ಆ ಮೂಲಕ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳ ಶಿಕ್ಷಕಿಯರಿಗೆ ಅನುಕೂಲವಾಗುವಂತೆ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುತ್ತಾರೆ.

ಪ್ರಾರಂಭದಲ್ಲಿ ಸುಮಾರು 40ಕ್ಕೂ ಹೆಚ್ಚು ಶಿಕ್ಷಕರು ಇದರೊಂದಿಗೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಪ್ರತಿದಿನವೂ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ರಸಪ್ರಶ್ನೆಗಳಿಂದ ಆರಂಭವಾದ ಇವರ ಗ್ರೂಪ್ ಆನ್ಲೈನ್ ಮೂಲಕವೇ ಗೆದ್ದವರಿಗೆ ಪ್ರಶಸ್ತಿ ನೀಡಿ ಪ್ರೇರೇಪಣೆ ನೀಡುತ್ತದೆ. ‌

ಕಲಿಕಾ ಉಪಕರಣಗಳ ಹಂಚಿಕೆ, ನಲಿಕಲಿ ಚಪ್ಪರ, ನಲಿಕಲಿ ಪೀಠೋಪಕರಣಗಳ ಹಂಚಿಕೆ, ಗೊಡೆ ಬರಹ, ಶಾಲೆಯ ಪರಿಸರಗಳ ಫೋಟೊ ಹಂಚಿಕೆ, ಮಕ್ಕಳ ವಿಶೇಷ ಪ್ರತಿಭೆಗಳ ಹಂಚಿಕೆ, ವಿಜ್ಞಾನ, ಗಣ ತ ಹೀಗೆ ಹಲವು ವಿಷಯಗಳನ್ನು ದಾಟಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರ ವಹಿಸಿ ಇಡೀ ರಾಜ್ಯದ ಗಮನ ಸೆಳೆಯುತ್ತಾರೆ. 40ರಿಂದ ಆರಂಭವಾದ ಈ ಸಂಖ್ಯೆ ಇಂದು 850ಕ್ಕೂ ಹೆಚ್ಚು ನಲಿಕಲಿ ಶಿಕ್ಷಕರು ತಂಡದಲ್ಲಿದ್ದಾರೆ.

ಮುಖ್ಯವಾಗಿ ನಲಿಕಲಿ ಕನ್ನಡ ವೀಡಿಯೋಗಳು, ಗಣಿತ ಹಾಗೂ ಪರಿಸರ ವೀಡಿಯೋಗಳನ್ನು ಯುಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸಾವಿರಾರು ಶಿಕ್ಷಕಿಯರಿಗೆ ದಾರಿದೀಪವಾಗಿದ್ದಾರೆ. ಇದುವರೆಗೂ ಸಾವಿರಕ್ಕೂ ಹೆಚ್ಚು ವೀಡಿಯೋಗಳನ್ನು ರಚಿಸಿ ಲಿಂಕ್‌ಗಳ ಮೂಲಕ ಅಪ್ಲೋಡ್ ಮಾಡಲಾಗಿದೆ. ಈ ತಂಡದಿಂದ ಅದೆಷ್ಟೋ ಸಂಪನ್ಮೂಲ ವ್ಯಕ್ತಿಗಳು ಹೊರಹೊಮ್ಮಿದ್ದಾರೆ. ತಂಡದಲ್ಲಿರುವ ಎಲ್ಲರಿಗೂ ಅವಕಾಶ ನೀಡಲಾಗಿದೆ. ಜಿಲ್ಲಾ ಮತ್ತು ರಾಜ್ಯ ಹಂತದಲ್ಲೂ ಕೂಡ ಇದು ಗಮನ ಸೆಳೆದಿದೆ.

ಶಿಕ್ಷಣ ಇಲಾಖೆಯಿಂದ ಹೊರಬರುವ ಹೊಸಹೊಸ ವಿಷಯಗಳನ್ನು ಮುಂಚಿತವಾಗಿ ಅಪ್ಡೇಟ್ ಮಾಡುವುದಲ್ಲದೆ ಆ ವಿಷಯಗಳನ್ನು ಸರಳವಾಗಿ ತಿಳಿಸುತ್ತಾ ಬರುತ್ತದೆ ಈ ತಂಡ. ತಮ್ಮ ಬಿಡುವಿನ ವೇಳೆಯನ್ನು ಕೂಡ ಶೈಕ್ಷಣಿಕ ಏಳಿಗೆಗಾಗಿ ಮತ್ತು ಅರಿವನ್ನು ವಿಸ್ತಾರ ಮಾಡಲು ಈ ತಂಡ ಶ್ರಮಿಸುತ್ತಿದೆ. ಇದೇ ತಂಡ ವಿದ್ಯಾ ಪ್ರವೇಶದ ಹನ್ನೆರಡು ವಾರದ ಚಟುವಟಿಕೆಗಳನ್ನು ಎಫ್‌ಎಂ ರೇಡಿಯೋ ಮೂಲಕ ಕೂಡ ಬಿತ್ತರಿಸಿದೆ.

ಕೇವಲ ಶೈಕ್ಷಣಿಕ ವಿಷಯಕ್ಕೆ ಮಾತ್ರ ಸೀಮಿತಗೊಳ್ಳದೆ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಹೊರಹಾಕುವುದು ಮಕ್ಕಳಿಗೆ ತಾಯ್ತನ ನೀಡುವುದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಪ್ರೋತ್ಸಾಹ ನೀಡುವುದು, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳುವುದು, ಶಾಲೆಯ ಸುತ್ತಮುತ್ತ ಒಳ್ಳೆಯ ಪರಿಸರ ನಿರ್ಮಿಸುವುದು, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಬಿಟ್ಟುಹೋಗದಂತೆ ನೋಡಿಕೊಳ್ಳುವುದು, ಮಕ್ಕಳ ಪೋಷಕರ ಜೊತೆ ವಿಶೇಷ ಸಂಬಂಧ ಇಟ್ಟುಕೊಳ್ಳುವುದು ಈ ತಾರೆಯರ ಹೆಚ್ಚಿನ ಕೆಲಸವಾಗಿದೆ.

ಜೊತೆಗೆ ಸರ್ಕಾರಿ ಶಾಲೆಗಳಿಗೆ ಬೇಕಾದ ಬೆಂಚು, ಕುರ್ಚಿ, ಬ್ಯಾಗುಗಳು, ಕುಡಿಯುವ ನೀರಿನ ಸೌಲಭ್ಯ, ಊಟದ ತಟ್ಟೆ, ನಲಿಕಲಿ ಪರಿಕರಗಳು ಮುಂತಾದವುಗಳನ್ನು ದಾನಿಗಳನ್ನು ಹುಡುಕಿ ಆ ಮೂಲಕ ಶಾಲೆಗಳ ಅಭಿವೃದ್ಧಿಗೂ ಈ ತಂಡ ಶ್ರಮಿಸುತ್ತಿದೆ. ರೋಟರಿ ಸಂಸ್ಥೆ, ಬೆಂಗಳೂರಿನ ಆರ್.ಕೆ. ಫೌಂಡೇಷನ್, ಲಯನ್ಸ್ ಸಂಸ್ಥೆ, ದಾನಿಗಳು, ಸರ್ಕಾರಿ ಶಾಲೆಗಳಿಗೆ ಇವರ ಕೆಲಸಗಳನ್ನು ನೋಡಿ ವಿಶೇಷ ಆಸಕ್ತಿ ವಹಿಸಿ ಸೌಲಭ್ಯಗಳನ್ನು ನೀಡಿದ್ದಾರೆ.

ಸರ್ಕಾರಿ ಶಿಕ್ಷಕರೆಂದರೆ ಒಂದು ರೀತಿಯಾಗಿ ಮೂಗು ಮುರಿಯುವ ಕಾಲದಲ್ಲಿ ಸರ್ಕಾರಿ ಶಾಲೆಯೂ ನಮ್ಮ ಮನೆ. ಇಲ್ಲಿ ಕಲಿಯುತ್ತಿರುವವರು ನಮ್ಮ ಮಕ್ಕಳು ಎಂಬ ತಾಯಿ ಹೃದಯದ ಈ ಶಿಕ್ಷಕಿಯರ ಕೆಲಸವನ್ನು ಮೆಚ್ಚಲೇಬೇಕು. ಇವರ ಕೆಲಸ ಹೀಗೆಯೇ ಮುಂದುವರಿಯಲಿ. ಇವರ ಅಂತಃಕರಣದ ಪಾಠ ಇತರರಿಗೂ ಅನುಕರಣೆಯಾಗಲಿ. ಸರ್ಕಾರಿ ಶಾಲೆಗಳು ಇಂತಹ ತಂಡದಿಂದ ಮತ್ತಷ್ಟು ಬೆಳಕು ಕಾಣಲಿ ಎಂಬುದೇ ನಮ್ಮ ಆಶಯವಾಗಿದೆ.

ನಲಿಕಲಿ ಕ್ರಿಯಾಶೀಲ ತಾರೆಯರು : ಫೌಜಿಯಾ ಸರವತ್ (ತಂಡದ ನಾಯಕಿ), ಭಾಗೀರಥಿ, ಮೀನಾಕ್ಷಿ, ರೇಖಾ ಎಂ.ಹೆಚ್. ಸುರಕ್ಷಿತ, ಕವಿತಾ ಕೆ.ಬಿ., ಜ್ಯೋತಿ ಹಾವಗೊಲ್ಲರ, ಪವಿತ್ತಾ ಎನ್., ದೇವಿಕರಣಮ್ಮ, ವಾಣಿ ಪಟೇಲ್, ಶೀಲಾ ಪಿ., ಪದ್ಮಶ್ರೀ, ಸುನಂದ, ವಾಸುಕಿ, ಪ್ರಿಯಾಂಕ, ನೀಲಾವತಿ, ಕೃಷ್ಣವೇಣ , ರೇಷ್ಮಾ ಡಿ.ಜಿ.

ಲೇಖಕರು: ಆರುಂಡಿ ಶ್ರೀನಿವಾಸಮೂರ್ತಿ

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...