ಪ್ರಧಾನಮಂತ್ರಿ ನರೇಂದ್ರಮೋದಿಯವರು ತೆಲಂಗಾಣಕ್ಕೆ ಭೇಟಿ ನೀಡುವ ಮುನ್ನ ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವರದಿ ಪ್ರಕಾರ ಬುಧವಾರ ಮುಂಜಾನೆ ಕರೀಂನಗರದಲ್ಲಿರುವ ಅವರ ನಿವಾಸದಿಂದ ಪೊಲೀಸರು ಕರೆದೊಯ್ದಿದ್ದಾರೆ. ಪೊಲೀಸರ ಈ ನಡೆಯಿಂದ ಬಿಜೆಪಿ ನಾಯಕರು ತೆಲಂಗಾಣ ಸರ್ಕಾರವನ್ನು ದೂಷಿಸಿದ್ದಾರೆ.
ಪೊಲೀಸ್ ತಂಡ ಮನೆಗೆ ಬಂದು ಸಂಜಯ್ ಕುಮಾರ್ ಅವರನ್ನ ವಶಕ್ಕೆ ಪಡೆಯುವ ವೇಳೆ ಸಂಜಯ್ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಪೊಲೀಸರನ್ನು ತಡೆಯಲು ಯತ್ನಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಅವರನ್ನು ನಲ್ಗೊಂಡಾ ಜಿಲ್ಲೆಯ ಬೊಮ್ಮಲ ರಾಮರಾಮ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮೇಂದ್ರ ರೆಡ್ಡಿ ಮಾತನಾಡಿ, “ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವರನ್ನು ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದಾರೆ. ಕರೀಂನಗರದಲ್ಲಿರುವ ಅವರ ನಿವಾಸದಿಂದಲೇ ಅಕ್ರಮವಾಗಿ ಬಂಧಿಸಿದ್ದಾರೆ” ಎಂದು ಹೇಳಿದ್ದಾರೆ.
ಪೊಲೀಸರು ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಿತ್ತು. ಬಂಡಿ ಸಂಜಯ್ ಎಲ್ಲಿಗೆ ಹೋಗುತ್ತಾರೆ ? ಇದು ತೆಲಂಗಾಣದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಕೆಲಸ ಎಂದು ಪ್ರೇಮೇಂದ್ರ ರೆಡ್ಡಿ ಆರೋಪಿಸಿದ್ದಾರೆ.
ಮಧ್ಯರಾತ್ರಿ ಸಂಸದರೊಬ್ಬರ ವಿರುದ್ಧ ಈ ಕ್ರಮದ ಅಗತ್ಯ ಏನಿತ್ತು? ಅವರ ಅಪರಾಧ ಮತ್ತು ಪ್ರಕರಣಗಳೇನು ಎಂಬುದನ್ನು ನಮಗೆ ಹೇಳುತ್ತಿಲ್ಲ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕೆಸಿಆರ್ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವುದು ಈ ಕ್ರಮದ ಹಿಂದಿನ ಕಾರಣ. ಇದೆಲ್ಲವೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಂಡಿ ಸಂಜಯ್ ಬಂಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತೆಲಂಗಾಣ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಪಿಎಂ ಮೋದಿ ಏಪ್ರಿಲ್ 8 ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದು, ಸಿಕಂದರಾಬಾದ್‌ನಿಂದ ತಿರುಪತಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಉದ್ಘಾಟಿಸುವ ಜೊತೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
https://twitter.com/ANI/status/1643486230624227331