ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಏಪ್ರಿಲ್ 4 ರಂದು ಲಾಹೋರ್ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಮೂರು ಪ್ರಕರಣಗಳಲ್ಲಿ ಅವರಿಗೆ ಜಾಮೀನು ದೊರೆತಿದೆ.
ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಮೂರು ಭಯೋತ್ಪಾದನಾ ಪ್ರಕರಣಗಳಲ್ಲಿ ಜಾಮೀನನ್ನು ಏಪ್ರಿಲ್ 13 ರವರೆಗೆ ವಿಸ್ತರಿಸಲಾಗಿದೆ.
ಝಿಲ್ಲೆ ಷಾ ಹತ್ಯೆ ಪ್ರಕರಣ, ಬೆಂಕಿ ಹಚ್ಚುವಿಕೆ ಮತ್ತು ರಾಜ್ಯ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವ ಮೂರು ಪ್ರಕರಣಗಳಲ್ಲಿಇಮ್ರಾನ್ ಖಾನ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಭಯೋತ್ಪಾದನೆ ನಿಗ್ರಹ ಮತ್ತು ನೆರವು ಮತ್ತು ಕುಮ್ಮಕ್ಕು ನೀಡುವ ಕಾನೂನುಗಳ ಅಡಿಯಲ್ಲಿ, ರೇಸ್ ಕೋರ್ಸ್ ಪೊಲೀಸ್ ಠಾಣೆಯಲ್ಲಿ ಇಮ್ರಾನ್ ಖಾನ್ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಜಾಮೀನು ಪಡೆಯಲು ಬಯಸಿದರೆ ಇಮ್ರಾನ್ ಖಾನ್ ವಿಚಾರಣೆಗೆ ಹಾಜರಾಗುವುದು ಕಡ್ಡಾಯ ಎಂದು ನ್ಯಾಯಾಧೀಶರು ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಭಾರೀ ಭದ್ರತೆಯಲ್ಲಿಆಗಮಿಸಿದ್ದರು. ಹಲವಾರು ಸಿಬ್ಬಂದಿಗಳು ಇಮ್ರಾನ್ ಖಾನ್ ಅವರನ್ನು ರಕ್ಷಿಸಲು ಬೃಹತ್ ಪಾಲಿಕಾರ್ಬೊನೇಟ್ ಹಾಳೆಗಳನ್ನು ಹಿಡಿದಿದ್ದರು.
ಜೊತೆಗೆ ಇಮ್ರಾನ್ ಖಾನ್ ಅವರ ತಲೆಯನ್ನು ಬುಲೆಟ್ ಪ್ರೂಫ್ ‘ಬಕೆಟ್’ನಿಂದ ಮುಚ್ಚಲಾಗಿತ್ತು. ಅವರು ನ್ಯಾಯಾಲಯಕ್ಕೆ ಹಾಜರಾದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇಮ್ರಾನ್ ಖಾನ್ ಬುಲೆಟ್ ಪ್ರೂಫ್ ಬುರ್ಖಾ ಧರಿಸಿದ್ದಾರಾ ಎಂದು ಕೆಲವು ನೆಟ್ಟಿಗರು ಕೇಳಿದ್ದಾರೆ.
“ಬಾಲಿವುಡ್ ಸಿನಿಮಾದ ಪಠಾಣ್ ಗನ್ ಮತ್ತು ಬಾಂಬ್ಗಳೊಂದಿಗೆ ಆಟವಾಡುತ್ತಾನೆ. ವಾಸ್ತವದಲ್ಲಿ, ಪಠಾಣ್ ಬುಲೆಟ್ ಪ್ರೂಫ್ ಬುರ್ಖಾದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ” ಎಂದು ಜನಪ್ರಿಯ ಹ್ಯಾಂಡಲ್ ಪಾಕಿಸ್ತಾನ್ ಅನ್ಟೋಲ್ಡ್ ಕಾಮೆಂಟ್ ಮಾಡಿದೆ.
ಭದ್ರತಾ ಸಿಬ್ಬಂದಿ, ಬುಲೆಟ್ ಪ್ರೂಫ್ ವಸ್ತುಗಳೊಂದಿಗೆ ಇಮ್ರಾನ್ ಖಾನ್ ಅವರನ್ನು ಎಲ್ಲಾ ಕಡೆಗಳಿಂದಲೂ ಸುತ್ತುವರೆದಿದ್ದರು. ಅವರು ಮಾಜಿ ಪ್ರಧಾನಿಗೆ ಮಾನವ ಗುರಾಣಿಯಂತೆ ಕಾರ್ಯ ನಿರ್ವಹಿಸಿದ್ದಾರೆ.
ಕಳೆದ ವರ್ಷ ವಜೀರಾಬಾದ್ನಲ್ಲಿ ನಡೆದ ರ್ಯಾಲಿಯಲ್ಲಿ ದಾಳಿ ನಡೆದಾಗಿನಿಂದ ಖಾನ್ ಅವರಿಗೆ ಜೀವ ಭಯವಿದ್ದು, ಹೆಚ್ಚಿನ ಭದ್ರತೆಯಲ್ಲಿ ಮಾತ್ರ ಹೊರಬರುತ್ತಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಖಾನ್ ಪ್ರಸ್ತುತ 140 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದು, ಭಯೋತ್ಪಾದನೆ, ಕೊಲೆ, ಕೊಲೆ ಯತ್ನ ಮತ್ತು ಧರ್ಮನಿಂದೆಯ ಬಗ್ಗೆ PMLN ನೇತೃತ್ವದ ಸಮ್ಮಿಶ್ರ ಸರ್ಕಾರವು ಕಳೆದ 11 ತಿಂಗಳುಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಇದಕ್ಕೂ ಮುನ್ನ ಮಾರ್ಚ್ನಲ್ಲಿ ಖಾನ್ ಲಾಹೋರ್ ಹೈಕೋರ್ಟ್ನಲ್ಲಿ ಇದೇ ರೀತಿ ಹಾಜರಾಗಿದ್ದರು.
ಇದೇ ಪ್ರಕರಣದಲ್ಲಿ ಇಮ್ರಾನ್ ಖಾನ್ಗೆ ಲಾಹೋರ್ ಹೈಕೋರ್ಟ್ (ಎಲ್ಎಚ್ಸಿ) ರಕ್ಷಣಾತ್ಮಕ ಜಾಮೀನು ಮಂಜೂರು ಮಾಡಿತು ಮತ್ತು ಈ ವಿಷಯದಲ್ಲಿ ಸಂಬಂಧಿತ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸಿತ್ತು. ನ್ಯಾಯಾಲಯಕ್ಕೆ ಆಗಮಿಸಿದ ಇಮ್ರಾನ್ ಖಾನ್, ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯಲ್ಲಿ ತಾನು ತನಿಖೆಯಲ್ಲಿ ಭಾಗಿಯಾಗಲು ಬಯಸಿದ್ದೇನೆ ಆದರೆ ಪೊಲೀಸರಿಂದ ಬಂಧಿಸುವ ಭಯವಿದೆ ಎಂದು ಹೇಳಿದ್ದರು.
ಇಮ್ರಾನ್ ಖಾನ್ ಅವರು ಪ್ರತಿ ಪ್ರಕರಣದಲ್ಲಿ (PKR) 100,000 ಜಾಮೀನು ಬಾಂಡ್ ನೀಡಬೇಕು ಮತ್ತು ತನಿಖೆಗೆ ಸಹಕರಿಸಬೇಕು ಮತ್ತು ನಿಗದಿತ ವಿಚಾರಣೆಗಳಲ್ಲಿ ಹಾಜರಾಗಬೇಕು ಎಂಬ ಷರತ್ತಿನೊಂದಿಗೆ ATC ಯಿಂದ ಜಾಮೀನು ಪಡೆದಿದ್ದಾರೆ.