ಮಹಾರಾಷ್ಟ್ರ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಹಲವು ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿಯನ್ನು ಬಂಧಿಸಲಾಗಿದೆ. ನಕಲಿ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದ ಅಮನ್ ಎಂಬಾತನನ್ನು ಭಾನುವಾರ ಥಾಣೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗುವಂತೆ ಆರೋಪಿಗೆ ಸೂಚಿಸಿದ ಮೂಲ ಅಭ್ಯರ್ಥಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಲಯ 1 ಉಪ ಪೊಲೀಸ್ ಆಯುಕ್ತ ಗಣೇಶ ಗಾವಡೆ ತಿಳಿಸಿದ್ದಾರೆ.
ಅಭ್ಯರ್ಥಿಯ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪರಿಶೀಲನೆ ನಡೆಸಿದಾಗ ಆತ ಮೊಣಕಾಲಿನ ಜಾಗದಲ್ಲಿ ಸ್ಮಾರ್ಟ್ ವಾಚ್ ಮತ್ತು ಬ್ಲೂಟೂತ್ ಸಾಧನವನ್ನು ಬಚ್ಚಿಟ್ಟಿರುವುದು ಕಂಡುಬಂದಿದೆ. ಇಯರ್ ಹೆಡ್‌ಫೋನ್‌ಗಳನ್ನು ಸಹ ಹೊಂದಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ಅಭ್ಯರ್ಥಿ ಔರಂಗಾಬಾದ್‌ನವರಾಗಿದ್ದು ಮೂಲ ಅಭ್ಯರ್ಥಿ ಬೀಡ್‌ನವರು ಎಂದು ಡಿಸಿಪಿ ಹೇಳಿದರು.