![](https://kannadadunia.com/wp-content/uploads/2023/04/1747d22b-b2ef-40a2-b1f8-88a743ae5490.jpg)
ಗೋವಾದ ಹಳ್ಳಿಯೊಂದರಲ್ಲಿ ಕಪ್ಪು ಚಿರತೆ ಪ್ರತ್ಯಕ್ಷವಾಗಿದ್ರಿಂದ ಜನ ಭಯಭೀತರಾಗಿದ್ದರು. ಜನರ ಭೀತಿಗೆ ಕಾರಣವಾದ ಕಪ್ಪು ಚಿರತೆಯನ್ನು ರಕ್ಷಿಸಿದ್ದು ತಾತ್ಕಾಲಿಕವಾಗಿ ವೀಕ್ಷಣೆಗಾಗಿ ರಾಜ್ಯದ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಶನಿವಾರದಂದು ದಕ್ಷಿಣ ಗೋವಾ ಜಿಲ್ಲೆಯ ಬಲ್ಲಿ ಗ್ರಾಮದಲ್ಲಿ ಜನವಸತಿಗೆ ನುಗ್ಗಿದ ಚಿರತೆಯನ್ನು ಅರಣ್ಯ ಇಲಾಖೆ ಬೋನಿನಲ್ಲಿ ಹಿಡಿಯುವ ಮೂಲಕ ರಕ್ಷಿಸಿದೆ. ನಂತರ ಉತ್ತರ ಗೋವಾದ ಬೊಂಡ್ಲಾ ಮೃಗಾಲಯಕ್ಕೆ ಕೊಂಡೊಯ್ಯಲಾಗಿದೆ.
ಅದಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆಯನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಗುವುದಿಲ್ಲ. ಆದರೆ ಅದರ ಆರೋಗ್ಯ ಸದೃಢವಾದಾಗ ಅದನ್ನು ಗೋವಾದ ಆಳವಾದ ಅರಣ್ಯಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ವಾಸಸ್ಥಾನವನ್ನು ತೊರೆದು ಜನವಸತಿಗೆ ಪ್ರವೇಶಿಸಲು ಕಾರಣವೇನು ಎಂಬ ಬಗ್ಗೆಯೂ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.