ನವದೆಹಲಿ: ಬೇಸಿಗೆ ಬಿಸಿಲಿನಿಂದ ಬಸವಳಿದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಈ ಬಾರಿ ಬಿಸಿಲ ಧಗೆ ಹೆಚ್ಚಾಗಲಿದೆ. ಏಪ್ರಿಲ್, ಮೇ, ಜೂನ್ ತಿಂಗಳಿನಲ್ಲಿ ಪ್ರಖರವಾಗಿ ಸೂರ್ಯ ಉರಿಯಲಿದ್ದು, ತಾಪಮಾನ ಹೆಚ್ಚಾಗಲಿದೆ.
ಜೂನ್ ಮಧ್ಯದವರೆಗೂ ದೇಶದ ಅನೇಕ ಭಾಗಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ, ಉಷ್ಣ ಮಾರುತಗಳ ಸಂಖ್ಯೆ ಹೆಚ್ಚುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಡಿಕೆಗಿಂತಲೂ ಎರಡರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಾಗುತ್ತದೆ. ಏಪ್ರಿಲ್ ಮಧ್ಯಭಾಗದಿಂದ ಬಿಸಿಲು ಪ್ರಖರವಾಗಿರುತ್ತದೆ.
ವಿದ್ಯುತ್ ಬೇಡಿಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಜಾರ್ಖಂಡ್, ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಪಂಜಾಬ್ ಹರಿಯಾಣದಲ್ಲಿ ಉಷ್ಣಮಾರುತ ಹಾವಳಿ ಹೆಚ್ಚಾಗುತ್ತದೆ, ಕರ್ನಾಟಕ ಸೇರಿದಂತೆ ದಕ್ಷಿಣದ ಕೆಲವು ರಾಜ್ಯ ಒಳಗೊಂಡ ಪ್ರದೇಶಗಳಲ್ಲಿ ಬಿಸಿಲ ಝಳ ಕೊಂಚ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.