ಸಿಮೆಂಟ್ ಟ್ಯಾಂಕುಗಳ ಬದಲಿಗೆ ಪಿವಿಸಿ ಟ್ಯಾಂಕುಗಳ ಬಳಕೆಯನ್ನು ನಾವು ನೋಡಿಕೊಂಡೇ ಬೆಳೆದು ದೊಡ್ಡವರಾಗಿದ್ದೇವೆ. ಈ ನೀರಿನ ಟ್ಯಾಂಕುಗಳು ಒಂದೇ ಬಣ್ಣ ಹಾಗೂ ವಿನ್ಯಾಸದಲ್ಲಿ ಏಕೆ ಬರುತ್ತವೆ ಗೊತ್ತೇ?
ಟ್ಯಾಂಕಿನಲ್ಲಿರುವ ನೀರು ಟ್ಯಾಂಕಿನ ಮೇಲೆ ಎಲ್ಲ ದಿಕ್ಕುಗಳಲ್ಲೂ ಒತ್ತಡ ಹೇರುತ್ತದೆ. ಟ್ಯಾಂಕ್ ಸಿಲಿಂಡರ್ ಆಕೃತಿಯಲ್ಲಿದ್ದರೆ ನೀರಿನ ಒತ್ತಡ ಎಲ್ಲ ಕಡೆಯೂ ಸಮನಾಗಿ ಹಂಚಿಕೆಯಾಗುತ್ತದೆ. ಹೀಗಾಗಿ ಯಾವುದೇ ಒಂದು ಭಾಗದ ಮೇಲೆ ಹೆಚ್ಚಿನ ಒತ್ತಡದ ಅನುಭವ ಆಗುವುದಿಲ್ಲ. ಅಲ್ಲದೇ ವೃತ್ತಾಕೃತಿಯ ಟ್ಯಾಂಕುಗಳನ್ನು ಸ್ವಚ್ಛಗೊಳಿಸುವುದು ಸುಲಭ. ಅಲ್ಲದೇ ಪಿವಿಸಿಯಲ್ಲಿ ತಯಾರಾಗುವ ಕಾರಣ ಮುರಿಯದೇ ಇರಲಿ ಎಂದು ಹೀಗೆ ಸಿಲಿಂಡರ್ ಆಕೃತಿಯಲ್ಲಿ ಟ್ಯಾಂಕ್‌ಗಳನ್ನು ರಚಿಸಲಾಗುತ್ತದೆ.
ಈ ಪಿವಿಸಿ ಟ್ಯಾಂಕುಗಳಲ್ಲಿ ಬಹುತೇಕ ಕಪ್ಪು ಬಣ್ಣದ್ದೇ ಇರುತ್ತವೆ. ಇದರ ಹಿಂದೆಯೂ ವೈಜ್ಞಾನಿಕ ಕಾರಣವೊಂದಿದೆ. ನಿಂತ ನೀರಿನಲ್ಲಿ ಪಾಚಿ ಗಟ್ಟಿಯಾಗಿ ನಿಲ್ಲಬಹುದಾದ ಕಾರಣದಿಂದ ಹೀಗೆ ಮಾಡಲಾಗುತ್ತದೆ. ಕಪ್ಪು ಬಣ್ಣವು ಹೆಚ್ಚಿನ ಪ್ರಮಾಣದಲ್ಲಿ ಸೂರ್ಯನ ಶಾಖವನ್ನು ಹೀರಿಕೊಳ್ಳುವ ಕಾರಣ, ಪಾಚಿಯು ಬೇಗ ಗಟ್ಟಿಯಾಗಿ ನಿಲ್ಲುವುದು ತಪ್ಪುತ್ತದೆ. ಆದರೆ ಇದರಿಂದ ಆಗುವ ಸಮಸ್ಯೆ ಎಂದರೆ, ಟ್ಯಾಂಕುಗಳು ಅತಿಯಾದ ಶಾಖ ಎಳೆದುಕೊಳ್ಳುವ ಪರಿಣಾಮ ಅದರೊಳಗಿನ ನೀರು ಕಾದು ಬಿಡುತ್ತದೆ. ಒಮ್ಮೊಮ್ಮೆ ಈ ಕಾರಣದಿಂದ ಟ್ಯಾಂಕುಗಳು ಸಿಡಿಯುವ ಸಾಧ್ಯತೆ ಸಹ ಇರುತ್ತದೆ.
ಈ ಕಾರಣದಿಂದ ಟ್ಯಾಂಕ್‌ಗಳ ಮೈಮೇಲೆ ಪಟ್ಟಿಗಳಿದ್ದು, ಅವುಗಳು ಅಧಿಕ ಶಾಖದಿಂದ ಉಂಟಾಗುವ ನೀರಿನ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.