ಬೆಂಗಳೂರು: ವಿಧಾನಸಭಾ ಚುನಾವಣೆ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ದಂಡಯಾತ್ರೆ ಆರಂಭಿಸಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಟೂರ್ ಡೀಲ್ ನಡೆಸಿದ್ದು, ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಸುರೇಶ್, ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು 7 ಬಾರಿ ರಾಜ್ಯ ಪ್ರವಾಸ ಮಾಡಿದ್ದು, ಅವರ ಪ್ರವಾಸದ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರು ಕೋಟಿ, ಕೋಟಿ ಲೂಟಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಂಪೇಗೌಡ ಪ್ರತಿಮೆ ವೆಚ್ಚ 59 ಕೋಟಿ. ಉದ್ಘಾಟನೆ ಕಾರ್ಯಕ್ರಮಕ್ಕೆ ಸರ್ಕಾರ 30 ಕೋಟಿ ರೂ. ಖರ್ಚು ಮಾಡಿ, ಲೂಟಿ ಹೊಡೆದಿದೆ ಎಂದು ಆರೋಪಿಸಿದರು.
‘ಸರ್ಕಾರದಿಂದ ಪ್ರಧಾನಮಂತ್ರಿಗಳ ಪ್ರವಾಸದ ಡೀಲ್ ನಡೆಯುತ್ತಿದೆ. ಇದು 40% ಅಲ್ಲ 200% ಡೀಲ್ ನಡೆಯುತ್ತಿದೆ. ಪ್ರಧಾನಿ ಪ್ರವಾಸದ ಹೆಸರಲ್ಲಿ ಬಿಜೆಪಿಗರು ಲೂಟಿ ಹೊಡೆಯುತ್ತಿದ್ದಾರೆ. ಏರ್ ಪೋರ್ಟ್ ರಸ್ತೆ ಅಭಿವೃದ್ಧಿ ಮಾಡಲು ಅದು ರಾಜ್ಯ ಸರ್ಕಾರ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಅದಕ್ಕೆ 8.50 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಈ ರಸ್ತೆ ಎಂದಾದರೂ ಗುಂಡಿ ಬಿದ್ದಿತ್ತಾ ? ಪ್ರಧಾನಮಂತ್ರಿಗಳು ಆ ರಸ್ತೆಯಲ್ಲಿ ಸಂಚಾರ ಮಾಡಿದರಾ ? ವಿಮಾನದಲ್ಲಿ ಬಂದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತೆ ವಿಮಾನದಲ್ಲಿ ಪ್ರಯಾಣ ಮಾಡಿದರು. ಇಲ್ಲಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.
ರಾಜ್ಯದ ಇತರ ಭಾಗಗಳ ಕಾರ್ಯಕ್ರಮಗಳಲ್ಲಿ ಅದೆಷ್ಟು ಲೂಟಿ ಮಾಡಲಾಗಿದೆಯೋ ಗೊತಿಲ್ಲ ಮೋದಿ ಅವರ ಸರ್ಕಾರಿ ಕಾರ್ಯಕ್ರಮಗಳಿಗೆ ಆಗಿರುವ ವೆಚ್ಚದ ಬಗ್ಗೆ ಮಾಧ್ಯಮಗಳು ಹಾಗೂ ಆರ್ ಟಿ ಐ ಕಾರ್ಯರ್ತತರು ಮಾಹಿತಿ ಹೊರತೆಗೆಯಬೇಕು ಎಂದು ಹೇಳಿದರು.