ಬೆಂಗಳೂರು: ವಿಧಾನಸಭಾ ಚುನಾವಣೆ ರಣಕಣ ರಂಗೇರಿದ್ದು, ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಈ ನಡುವೆ ಸಚಿವ ಮುನಿರತ್ನ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್, ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ತಮಿಳರನ್ನು ಎತ್ತಿಕಟ್ಟುವ ಕೆಲಸವನ್ನು ಸಚಿವ ಮುನಿರತ್ನ ಮಾಡಿದ್ದಾರೆ. ಬೆಂಗಳೂರಿನ ಜಾಲಹಳ್ಳಿ ವಾರ್ಡ್ ನ ಖಾತಾನಗರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸಚಿವರು ಮಾಡಿರುವ ಭಾಷಣ ವೈರಲ್ ಆಗಿದ್ದು, ಯಾರಾದ್ರೂ ಒಳಗಡೆ ಬಂದ್ರೆ ಓಡಾಡಿಸಿಕೊಂಡು ಹೊಡಿರಿ ಎಂದು ಸಚಿವರು ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ತಮಿಳರಿಗೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚುನಾವಣೆ ದಿನ ಯಾರಾದ್ರೂ ಒಳಗಡೆ ಬಂದ್ರೆ ಓಡಾಡಿಸಿಕೊಂಡು ಹೊಡಿರಿ. ಮಿಕ್ಕಿದ್ದು ನಾನು ನೋಡಿಕೊಳ್ತೇನೆ. ಯಾವ ತರಹ ಹೊಡಿಬೇಕು ಅಂದ್ರೆ ಅವರು ತಿರುಗಿ ನೋಡಬಾರದು. ಆ ತರ ಹೊಡಿಬೇಕು. ಯಾರ್ಯಾರು ಹೊಡಿತೀರಾ ? ಕೈ ಎತ್ತಿ……. ನಾಳೆ ವೋಟ್ ಹಾಕುವ ದಿನ ನಮ್ದು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ತಮಿಳರು ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ಸಾರ್ವಜನಿಕರ ಸಭೆಯಲ್ಲಿ ಸಚಿವ ಮುನಿರತ್ನ ಹೇಳಿದ್ದಾರೆ. ಈ ಮೂಲಕ ಕನ್ನಡಿಗರ ವಿರುದ್ಧ ತಮಿಳಿಗರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಕನ್ನಡಿಗರು-ತಮಿಳಿಗರ ನಡುವೆ ಸಂಘರ್ಷವುಂಟು ಮಾಡುವ ಉದ್ದೇಶಕ್ಕೆ ಇಂತಹ ಹೇಳಿಕೆ ಕೊಟ್ಟಿದ್ದು, ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.