ಸ್ವಂತ ರಕ್ತ ಸಂಬಂಧಿಕರಿಂದಲೇ ಏನನ್ನೂ ನಿರೀಕ್ಷಿಸುವುದೇ ತಪ್ಪಾಗಬಹುದಾದ ಇಂದಿನ ದಿನಗಳಲ್ಲಿ, 72 ವವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಾವು ಚಲಿಸುತ್ತಿದ್ದ ಊಬರ್ ಕ್ಯಾಬ್ ಚಾಲಕರೊಬ್ಬರಿಂದ ಮರುಜೀವ ಪಡೆದ ಘಟನೆ ಅಮೆರಿಕದಲ್ಲಿ ಜರುಗಿದೆ.
ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಟಿಮ್ ಲೆಟ್ಸ್ ಸದ್ಯ ಊಬರ್ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಬಿಲ್ ಸುಮಿಯೆಲ್ ಹೆಸರಿನ ಪ್ರಯಾಣಿಕರೊಬ್ಬರನ್ನು ತಮ್ಮ ಕ್ಯಾಬ್‌ನಲ್ಲಿ ಕರೆದೊಯ್ಯುತ್ತಿದ್ದರು.
ಡಯಾಲಿಸಿಸ್ ಕೇಂದ್ರವೊಂದರಿಂದ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಲ್ ಈ ಕ್ಯಾಬ್ ಹಿಡಿದಿದ್ದಾರೆ. ಟಿಮ್‌ನ ಸ್ನೇಹಶೀಲತೆ ಕಂಡು ಅವರೊಡನೆ ಕ್ಯಾಬ್‌ನಲ್ಲೇ ಮನಬಿಚ್ಚಿ ಮಾತನಾಡಿದ ಬಿಲ್, ತಮಗೆ ಕಿಡ್ನಿ ಕಸಿಯ ಅಗತ್ಯವಿದೆ ಎಂದಿದ್ದಾರೆ. 20-30 ವರ್ಷಗಳ ಹಿಂದೆ ಡಯಾಬಿಟಿಸ್‌ಗೆ ತುತ್ತಾಗಿರುವ ಬಿಲ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
ಬಿಲ್‌ರ ಕಥೆ ಕೇಳಿ ಮುಮ್ಮಲ ಮರುಗಿದ ಟಿಮ್, ತಮ್ಮ ಒಂದು ಕಿಡ್ನಿಯನ್ನು ಕೊಡುವುದಾಗಿ ಹೇಳಿದ್ದಾರೆ. ಬಿಲ್‌ರ ಮನೆ ಬಳಿ ಬರುತ್ತಲೇ ಅವರಿಗೆ ತನ್ನ ದೂರವಾಣಿ ಸಂಖ್ಯೆ ನೀಡಿದ ಟಿಮ್, ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ಟಿಮ್‌ರ ಕಿಡ್ನಿ ಬಿಲ್‌ಗೆ ಸೂಕ್ತವಾಗಿದೆ ಎಂದು ವೈದ್ಯರು ಪರೀಕ್ಷೆ ಮಾಡಿ ತಿಳಿಸಿದ್ದಾರೆ.
ತಮ್ಮ ಜೀವ ಉಳಿಸಲು ತನ್ನದೊಂದು ಕಿಡ್ನಿ ದಾನ ಮಾಡಿದ ಟಿಮ್‌ರನ್ನು ಇತ್ತೀಚೆಗೆ ಮತ್ತೊಮ್ಮೆ ಭೇಟಿಯಾದ ಬಿಲ್ ಕಳೆದ ಡಿಸೆಂಬರ್‌ನಲ್ಲಿ ಬಿಲ್‌ರ ಯಶಸ್ವೀ ಕಿಡ್ನಿ ಕಸಿಯ ವರ್ಷಾಚರಣೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ತಮ್ಮೊಂದಿಗೆ ಟಿಮ್ ಇರುವ ಚಿತ್ರವೊಂದನ್ನು ಬಿಲ್ ಪೋಸ್ಟ್ ಮಾಡಿದ್ದು, ಅವರ ಕಥೆಯು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.