ಮೋದಿ ಉಪನಾಮ ಹೇಳಿಕೆಯಿಂದ ಸಂಸದ ಸ್ಥಾನದಿಂದ ಅನರ್ಹಗೊಂಡು ಜೈಲು ಶಿಕ್ಷೆಗೊಳಗಾಗಿದ್ದು ಸರ್ಕಾರಿ ಮನೆ ಕಳೆದುಕೊಂಡಿರುವ ರಾಹುಲ್ ಗಾಂಧಿಯವರಿಗೆ ಪಕ್ಷದ ನಾಯಕರು ನೆರವಿನ ಹಸ್ತ ಚಾಚಿದ್ದಾರೆ.
ಉತ್ತರ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಅಜಯ್ ರೈ ಅವರು ತಮ್ಮ ಮನೆಯನ್ನು ಸಾಂಕೇತಿಕವಾಗಿ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ಅರ್ಪಿಸಿದ್ದಾರೆ.
ಲಾಹುರಬೀರ್ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ʼಮೇರಾ ಘರ್ ಶ್ರೀ ರಾಹುಲ್ ಗಾಂಧಿ ಕಾ ಘರ್ʼ (ನನ್ನ ಮನೆ ಶ್ರೀ ರಾಹುಲ್ ಗಾಂಧಿ ಅವರ ಮನೆ) ಎಂಬ ಬೋರ್ಡ್ ಹಾಕಿದ್ದಾರೆ.
“ದೇಶದ ಸರ್ವಾಧಿಕಾರಿಗಳು ನಮ್ಮ ನಾಯಕ ರಾಹುಲ್ ಗಾಂಧಿ ಅವರ ನಿವಾಸವನ್ನು ಕಸಿದುಕೊಳ್ಳಲು ಬಯಸುತ್ತಾರೆ. ಆದರೆ, ಅವರಿಗೆ ದೇಶಾದ್ಯಂತ ಇರುವ ಕೋಟಿ ಕೋಟಿ ಕಾರ್ಯಕರ್ತರ ಮನೆಗಳು ರಾಹುಲ್ ಗಾಂಧಿಯವರದ್ದೇ ಎಂದು ಅವರಿಗೆ ತಿಳಿದಿಲ್ಲ. ಬಾಬಾ ವಿಶ್ವನಾಥ್ ನಗರದಲ್ಲಿ ನಾವು ಲಾಹುರಬೀರ್ ಪ್ರದೇಶದಲ್ಲಿದ್ದ ನಮ್ಮ ಮನೆಯನ್ನು ರಾಹುಲ್ ಗಾಂಧಿಗೆ ಅರ್ಪಿಸಿದ್ದೇವೆ ಎಂದು ಅಜಯ್ ರೈ ಹೇಳಿದ್ದಾರೆ.
ಕಾಶಿ ಸೇರಿದಂತೆ ಇಡೀ ಪ್ರಯಾಗರಾಜ್ ಪ್ರದೇಶದಲ್ಲಿ ರಾಹುಲ್ ಗಾಂಧಿ ಪರ ಈ ಅಭಿಯಾನ ಆರಂಭಿಸಲಾಗಿದೆ ಎಂದು ಅವರು ಹೇಳಿದರು.
“ಗಾಂಧಿ ಕುಟುಂಬವು ಕೋಟ್ಯಂತರ ಮೌಲ್ಯದ ಇಡೀ ಆನಂದ ಭವನವನ್ನು ದೇಶಕ್ಕೆ ಸಮರ್ಪಿಸಿದೆ. ರಾಹುಲ್ ಗಾಂಧಿಯವರಿಗೆ ಉಚ್ಚಾಟನೆ ನೋಟಿಸ್ ಕಳುಹಿಸುವುದು ಬಿಜೆಪಿಯ ಹೇಡಿತನದ ಕೃತ್ಯವಾಗಿದೆ” ಎಂದು ಅಜಯ್ ರೈ ಹೇಳಿದ್ದಾರೆ.
ರಾಹುಲ್ ಗಾಂಧಿ ಜನರ ಹೃದಯದಲ್ಲಿ ಮನೆ ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಹೇಳಿದ್ದಾರೆ.