ಗದಗ: ವಿಧಾನಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿ ದೇಗುಲದ ಮಹಾದ್ವಾರ ಉದ್ಘಾಟನೆ ಮಾಡಿದ ಘಟನೆ ನಡೆದಿದೆ.
ಗದಗದ ಚೇತನಾ ಕ್ಯಾಂಟೀನ್ ಸರ್ಕಲ್ ನಲ್ಲಿರುವ ಶ್ರೀ ಕ್ಷೇತ್ರ ಕೈಲಾಸ ವರಸಿದ್ದಿ ಗಣಪತಿ ದೇವಸ್ಥಾನದ ಮಹಾದ್ವಾರ ವನ್ನು ಸಚಿವರು ಇಂದು ಉದ್ಘಾಟನೆ ಮಾಡಿದರು. ಬೆಳಿಗ್ಗೆ 11:30ಕ್ಕೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿವೆ. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಭೀತಿಯಲ್ಲಿ ಸಚಿವ ಸಿ.ಸಿ.ಪಾಟೀಲ್ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿ, ಚುನಾವಣೆ ಘೋಷಣೆಗೂ ಮುನ್ನವೇ ದೇವಸ್ಥಾನದ ಮಹಾದ್ವಾರ ಉದ್ಘಾಟನೆ ಮಾಡಿದ್ದಾರೆ.