ಅಪಹರಣ ಆರೋಪದ ಮೇಲೆ ಶಿಕ್ಷೆಗೊಳಗಾಗಿರುವ ಉತ್ತರ ಪ್ರದೇಶದ ಮಾಫಿಯಾ ದೊರೆ ಕಮ್ ರಾಜಕಾರಣಿ ಅತೀಕ್ ಅಹ್ಮದ್ ಗೆ ಕೋರ್ಟ್ ಮುಂದೆ ವ್ಯಕ್ತಿಯೊಬ್ಬರು ಚಪ್ಪಲಿ ಹಾರ ಹಾಕಲು ಮುಂದಾದ ಘಟನೆ ನಡೆದಿದೆ.
ಉಮೇಶ್ ಪಾಲ್ ಎಂಬುವವರ ಅಪಹರಣ ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿದ್ದ ಅತೀಕ್ ಅಹ್ಮದ್ ನನ್ನ ಪ್ರಯಾಗ್ ರಾಜ್ ನ್ಯಾಯಾಲಯಕ್ಕೆ ಕರೆತಂದಾಗ ವರುಣ್ ಎಂದು ಗುರುತಿಸಲ್ಪಟ್ಟಿರುವ ವ್ಯಕ್ತಿ, ಪ್ರಯಾಗ್ ರಾಜ್ ನ್ಯಾಯಾಲಯದ ಹೊರಗೆ ಪಾದರಕ್ಷೆಗಳ ಹಾರವನ್ನು ಹೊತ್ತುಕೊಂಡು ನಿಂತಿದ್ದರು.
ಅತೀಕ್ ಅಹಮದ್‌ಗೆ ಪಾದರಕ್ಷೆಯ ಮಾಲೆ ಹಾಕುವಂತೆ ಮಾಡಿದರೆ ಪಾಲ ಸಮುದಾಯ ಹಾಗೂ ಇಡೀ ವಕೀಲ ಸಮುದಾಯ ಸಂತಸ ಪಡುತ್ತದೆ. ಆತ ವಕೀಲ ಸಮುದಾಯದವನನ್ನು ಕೊಂದಿದ್ದು, ಆತನಿಗೆ ಶಿಕ್ಷೆ ವಿಧಿಸಿ ತೀರ್ಪು ಕೇಳಲು ಬಂದಿರುವುದು ಸಂತಸ ತಂದಿದೆ ಎಂದರು. ಇದು ಉಮೇಶ್ ಪಾಲ್ ಮತ್ತು ರಾಜು ಪಾಲ್ ಅವರ ಕುಟುಂಬದ ಸದಸ್ಯರ ಪಾದರಕ್ಷೆಗಳಿರುವ ಹಾರ ಎಂದು ಹೇಳಿದರು.
2005 ರ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಅವರ ನಿವಾಸದ ಹೊರಗೆ ಫೆ.24 ರಂದು ಗುಂಡು ಹಾರಿಸಲಾಗಿತ್ತು.
ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಮಾಜಿ ಸಂಸದ ಅತೀಕ್ ಅಹ್ಮದ್, ಅವರ ಸಹೋದರ ಖಾಲಿದ್ ಅಜೀಂ ಮತ್ತು ಮಾಜಿ ಶಾಸಕ ಅಶ್ರಫ್ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದ್ದು, ಉಮೇಶ್ ಪಾಲ್ ಹತ್ಯೆಯ ಹಿಂದೆ ಅತೀಕ್ ಅವರ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.
ಅಪಹರಣ ಪ್ರಕರಣದ ತೀರ್ಪಿಗಾಗಿ ಅತೀಕ್ ಅಹ್ಮದ್ ಅವರನ್ನು ಇಂದು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಅತೀಕ್ ಅಹ್ಮದ್ ಸೇರಿದಂತೆ ಮತ್ತಿಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿದೆ.