ಭಾರತದಲ್ಲಿ ಒಂದೇ ದಿನದಲ್ಲಿ 1,573 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ ಸಕ್ರಿಯ ಕೊರೊನಾ ರೋಗಿಗಳ ಸಂಖ್ಯೆ 10,981ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ ಕೇರಳದಲ್ಲಿ ನಿನ್ನೆ ಕೊರೊನಾದಿಂದ ನಾಲ್ಕು ಸಾವುಗಳು ಸಂಭವಿಸಿವೆ. ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಕೋವಿಡ್ ಸೋಂಕಿನ ದೈನಂದಿನ ಸರಾಸರಿ 1.30 ಪ್ರತಿಶತ ಮತ್ತು ಸಾಪ್ತಾಹಿಕ ದರ 1.47 ಪ್ರತಿಶತದಷ್ಟಿದೆ.
ಸುಮಾರು 32 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10 ಕ್ಕಿಂತ ಹೆಚ್ಚಿದೆ. ಮಾರ್ಚ್ 3 ರಂದು ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪಾಸಿಟಿವಿಟಿ ಶೇ.0.54ರಷ್ಟಿತ್ತು. ಆದ್ರೀಗ ಶೇ.4.58 ಕ್ಕೆ ಏರಿದೆ. ದೆಹಲಿಯಲ್ಲಿ ಶೇ.0.53ರಷ್ಟಿದ್ದ ಪಾಸಿಟಿವಿಟಿ 4.53 ಕ್ಕೆ ಏರಿದೆ. ಅದೇ ರೀತಿ ಗುಜರಾತ್ ಮತ್ತು ಕೇರಳದಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕರ್ನಾಟಕದಲ್ಲಿ ಪಾಸಿಟಿವಿಟಿ ದರ ಶೇ. 1.65 ರಿಂದ 3.05 ಕ್ಕೆ ಹೆಚ್ಚಳವಾಗಿದೆ. ಹಿಮಾಚಲ ಪ್ರದೇಶದಲ್ಲಿ ಶೇ.1.92 ರಿಂದ 7.48 ಕ್ಕೆ ಏರಿದೆ.
ಭಾರತದಲ್ಲಿ, ಏಪ್ರಿಲ್ 10 ಮತ್ತು 11 ರಂದು, ಎಲ್ಲಾ ರಾಜ್ಯಗಳಲ್ಲಿ ಕೊರೊನಾ ವೈರಸ್‌ಗಾಗಿ ಅಣಕು ಡ್ರಿಲ್ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳೊಂದಿಗೆ ಸಭೆ ನಡೆಸಿದೆ. ಆರ್ ಟಿ ಪಿ ಸಿ ಆರ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ. ಎಲ್ಲಾ ಸಕಾರಾತ್ಮಕ ಮಾದರಿಗಳ ಜೀನೋಮ್ ಅನುಕ್ರಮವನ್ನು ಮಾಡಬೇಕು ಎಂದು ಹೇಳಿದೆ. ಆದಾಗ್ಯೂ ವೈದ್ಯರ ಪ್ರಕಾರ ಈಗ ಕೊರೊನಾ ಇತರ ವೈರಲ್ ಜ್ವರಗಳಂತೆ ಬಂದು ಹೋಗುತ್ತಲೇ ಇರುತ್ತದೆ. ಆದರೆ ಅದರ ಹೊಸ ರೂಪಾಂತರ xbb.1.6 ಎಲ್ಲಾ ವೈರಲ್ ಜ್ವರಗಳಿಗಿಂತ ಹೆಚ್ಚು ಹರಡುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಸ್ತುತ ವಿಶ್ವದ ದೈನಂದಿನ ಹೊಸ ಪ್ರಕರಣಗಳನ್ನು ನೋಡಿದರೆ, ಭಾರತವು ಏಳನೇ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳ ಅಂಕಿಅಂಶಗಳ ಪ್ರಕಾರ ರಷ್ಯಾ 10,940 ಪ್ರಕರಣಗಳು, ದಕ್ಷಿಣ ಕೊರಿಯಾ 9,361, ಜಪಾನ್ 6,324, ಫ್ರಾನ್ಸ್ 6,211, ಚಿಲಿ 2,446, ಆಸ್ಟ್ರಿಯಾ 1,861 ಮತ್ತು ನಂತರ ಭಾರತದಲ್ಲಿ 1,085 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.