ತುಮಕೂರು: ನಿಗದಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಗೆ 4 ವರ್ಷ ಶಿಕ್ಷೆ, 1.50 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಸಮೀಪದ ಕೊಡವತ್ತಿ ಗ್ರಾಮದ, ಪ್ರಸ್ತುತ ಬೆಂಗಳೂರಿನ ನಾಗರಬಾವಿಯಲ್ಲಿ ನೆಲೆಸಿರುವ ವಿ. ವೆಂಕಟೇಶ್ ಶಿಕ್ಷೆಗೆ ಒಳಗಾದವರು.
ಅವರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(KREDL)ದಲ್ಲಿ ಗ್ರೇಡ್ -1 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿದ್ದು, ಅವರಿಗೆ 4 ವರ್ಷ ಶಿಕ್ಷೆ ಹಾಗೂ 1.50 ಕೋಟಿ ರೂ. ದಂಡ ವಿಧಿಸಿ ತುಮಕೂರು 7ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ವೆಂಕಟೇಶ್ ಅವರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಆಡಳಿತಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕಚೇರಿ, ಮನೆ, ತುಮಕೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಎಸಿಬಿ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ನಿಗದಿಗಿಂತ ಹೆಚ್ಚಿನ ಆದಾಯ ಹೊಂದಿರುವುದು ಪತ್ತೆಯಾಗಿತ್ತು. ವೆಂಕಟೇಶ್ ಹಾಗೂ ಪತ್ನಿ, ಮಕ್ಕಳ ಹೆಸರಲ್ಲಿ 2.34 ಕೋಟಿ ರೂಪಾಯಿ ಆಸ್ತಿ ಇರುವುದು ಕಂಡುಬಂದಿದ್ದು, ಆದಾಯಕ್ಕಿಂತ 1.42 ಕೋಟಿ ರೂ. ನಷ್ಟು ಹೆಚ್ಚುವರಿ ಆಸ್ತಿ ಗಳಿಸಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.
ತುಮಕೂರು 7ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅವರು ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಆರ್.ಪಿ. ಪ್ರಕಾಶ್ ವಾದ ಮಂಡಿಸಿದ್ದರು.