ದಾವಣಗೆರೆ ಜಿಲ್ಲೆ, ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಸೋಮವಾರದಂದು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಲಂಚ ಸ್ವೀಕಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಅವರ ನಿರೀಕ್ಷಣಾ ಜಾಮೀನು ಹೈಕೋರ್ಟಿನಲ್ಲಿ ವಜಾಗೊಂಡ ಬೆನ್ನಲ್ಲೇ ಈ ಬಂಧನವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರ ಮಧ್ಯೆ ತಮ್ಮ ಪಕ್ಷದ ಶಾಸಕನ ಬಂಧನವಾಗಿರುವುದು ಆಡಳಿತರೂಢ ಬಿಜೆಪಿಗೆ ಮುಜುಗರ ತಂದೊಡ್ಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತಿಪಕ್ಷಗಳು ಚುನಾವಣಾ ಪ್ರಚಾರಕ್ಕೆ ಇದನ್ನೇ ಅಸ್ತ್ರವಾಗಿಸಿಕೊಳ್ಳಬಹುದು ಎಂಬ ಆತಂಕವೂ ಕಾಡುತ್ತಿದೆ.
ಈ ಹಿಂದೆ ಹಣ ಸ್ವೀಕರಿಸುತ್ತಿದ್ದ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಸಿಕ್ಕಿಬಿದ್ದಾಗ ವಿರೂಪಾಕ್ಷಪ್ಪನವರ ವಿರುದ್ಧವೂ ಲೋಕಾಯುಕ್ತದಿಂದ ಪ್ರಕರಣ ದಾಖಲಾಗಿತ್ತು. ಬಳಿಕ ನಿರೀಕ್ಷಣಾ ಜಾಮೀನು ಕೋರಿ ಅವರು ಕೋರ್ಟ್ ಮೆಟ್ಟಿಲೇರಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಆದರೆ ಸೋಮವಾರ ನಿರೀಕ್ಷಣಾ ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೊಳಗಾಗಿದ್ದಾರೆ.