ಮಾರ್ಬರ್ಗ್ ವೈರಸ್ ಸೋಂಕಿನಿಂದ ಆಫ್ರಿಕಾದ ಈಕ್ವೇಟೋರಿಯಲ್ ಗಿನಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹೆಮಾರಾಜಿಕ್ ಜ್ವರದ ಕಾರಣ ಇನ್ನೂ 20 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದೇ ಸೋಂಕಿನಿಂದ ತಾಂಜ಼ಾನಿಯಾದ ವಾಯುವ್ಯದಲ್ಲಿರುವ ಕಾಗೇರಾ ಪ್ರದೇಶದಲ್ಲಿ ಐವರು ಮೃತಪಟ್ಟಿದ್ದು, ಎಬೋಲಾ ರೀತಿಯ ಮತ್ತೊಂದು ಸೋಂಕು ಆವರಿಸುವ ಭೀತಿ ಮೂಡಿಸಿದೆ.
“ಮಾರ್ಬರ್ಗ್‌ನ ಪಸರುವಿಕೆಯು ದೊಡ್ಡ ಮಟ್ಟದ ಅಪಾಯದ ಸೂಚನೆಯಾಗಿದ್ದು, ಸೋಂಕು ಹಬ್ಬುವುದನ್ನು ತಡೆಗಟ್ಟಲು ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ,” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಡಾ. ಮ್ಯಾತ್ಸಿಡಿಸೋ ಮೊಯೇಟಿ ತಿಳಿಸಿದ್ದಾರೆ.
ಸೋಂಕು ಖಾತ್ರಿಯಾದ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬಂದ 20 ಮಂದಿಯಲ್ಲಿ ಇದೇ ಸೋಂಕಿನ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದು, ಈ ಮಂದಿಯ ದೇಹಗಳಿಂದ ಸ್ಯಾಂಪಲ್‌ಗಳನ್ನು ತೆಗೆದುಕೊಳ್ಳಲಾಗಿಲ್ಲ ಹಾಗೂ ಅವರಿಗೆ ಶುಶ್ರೂಷೆ ನೀಡಲು ಆಗಿಲ್ಲ ಎಂದಿದೆ.
2017ರಲ್ಲಿ ಇದೇ ಸೋಂಕಿನ ಪ್ರಕರಣ ಪತ್ತೆಯಾಗಿದ್ದ ಉಗಾಂಡಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುಂಬರುವ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆಂದು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ರೋಗಲಕ್ಷಣಗಳು
ತೀವ್ರ ಜ್ವರ ಹಾಗೂ ರಕ್ತಸ್ರಾವಗಳಿಗೆ ಕಾರಣವಾಗುವ ಮಾರ್ಬರ್ಗ್ ವೈರಾಣುಗಳು ಸೋಂಕಿತನ ದೇಹದಲ್ಲಿ ಪೂರ್ಣವಾಗಿ ನೆಲೆಯೂರಲು 21 ದಿನಗಳನ್ನು ತೆಗೆದುಕೊಳ್ಳುತ್ತವೆ. ದೇಹದಲ್ಲಿ ತಾಪಮಾನ ಏರಿಕೆ, ತೀವ್ರ ತಲೆನೋವುಗಳು ಕಾಣಿಸಿಕೊಂಡು, ಮೂರನೇ ದಿನಕ್ಕೆ ಬೇಧಿ, ಹೊಟ್ಟೆ ನೋವು, ಸ್ನಾಯು ಸೆಳೆತ, ವಾಂತಿಯಾಗುವ ಸಾಧ್ಯತೆಗಳು ಇರುತ್ತವೆ.
ರೋಗಲಕ್ಷಣಗಳು ಕಂಡ 5-7 ದಿನಗಳ ಅವಧಿಯಲ್ಲಿ ತೀವ್ರವಾದ ಹೆಮರಾಜಿಕ್ ಲಕ್ಷಣಗಳು ಕಾಣುತ್ತವೆ. ತೀವ್ರವಾಗಿ ಬಾಧಿತರಾದ ಸೋಂಕಿತರದಲ್ಲಿ ತೀವ್ರವಾದ ರಕ್ತಸ್ರಾವವೂ ಉಂಟಾಗುತ್ತದೆ. ಈ ರೋಗಲಕ್ಷಣಗಳು ನಿಯಂತ್ರಣಕ್ಕೆ ಬಾರದೇ ಹೋದಲ್ಲಿ, ತೀವ್ರವಾದ ರಕ್ತಹಾನಿ ಹಾಗೂ ಶಾಕ್‌ನಿಂದಾಗಿ 8-9 ದಿನಗಳ ಅವಧಿಯಲ್ಲಿ ಸಾವು ಸಂಭವಿಸುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿದೆ.
ಎಬೋಲಾದಂತೆಯೇ ಮಾರ್ಬರ್ಗ್ ವೈರಾಣು ಸಹ ಫಿಲೋವೈರಸ್ ಕುಟುಂಬಕ್ಕೆ ಸೇರಿದೆ.
ಸಾಮಾನ್ಯವಾಗಿ ಈ ವೈರಾಣುಗಳನ್ನು ಹೊತ್ತೊಯ್ಯುವ ಆಫ್ರಿಕ್ ಫ್ರೂಟ್ ಬಾವಲಿಯಿಂದ ಈ ಸೋಂಕು ಹಬ್ಬಿರುವ ಶಂಕೆ ಇದೆ. ಆದರೆ ಈ ವೈರಾಣುವಿನಿಂದ ಬಾವಲಿಗೆ ಯಾವುದೇ ಹಾನಿಯಾಗದು.
1967ರಲ್ಲಿ ಜರ್ಮನಿಯ ಮಾರ್ಬರ್ಗ್‌ನಲ್ಲಿ ಈ ಸೋಂಕು ಮೊಟ್ಟಮೊದಲ ಬಾರಿಗೆ ಪತ್ತೆಯಾಗಿದ್ದ ಕಾರಣ ಸೋಂಕಿಗೆ ಈ ಹೆಸರು ಬಂದಿದೆ. ಪ್ರಯೋಗಾಲವೊಂದರಲ್ಲಿ ಮಾರ್ಬರ್ಗ್ ಸೋಂಕಿತವಾಗಿದ್ದ ಮೂರು ಹಸಿರು ಕೋತಿಗಳನ್ನು ಉಗಾಂಡಾದಿಂದ ತರಿಸಲಾಗಿತ್ತು.
ಸದ್ಯ ಈ ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.