ವಿಮಾನದಲ್ಲಿ ಹಾರುವ ಕನಸು ನನಸಾಗುತ್ತಿಲ್ಲವೆಂದು ಆತ ಕೈಕಟ್ಟಿ ಕೂರಲಿಲ್ಲ. ಬದಲಾಗಿ ತಾನೇ ವಿಮಾನದಂತಹ ಮನೆಯನ್ನು ನಿರ್ಮಿಸಿ ಅದರಲ್ಲಿ ಪ್ರತಿದಿನ ಬದುಕುವ ಕಾರ್ಯಕ್ಕೆ ಮುಂದಾಗಿದ್ದಾನೆ.
ನಿರಾಸೆಯನ್ನ ಮತ್ತೊಂದು ರೂಪದ ಛಲವನ್ನಾಗಿ ಮಾಡಿಕೊಂಡ ಕಾಂಬೋಡಿಯಾದ ವ್ಯಕ್ತಿಯೊಬ್ಬರು ತಮ್ಮ ಮನೆಯನ್ನ ಖಾಸಗಿ ಜೆಟ್ ನಂತೆ ನಿರ್ಮಿಸಿದ್ದಾರೆ.
ಚ್ರಾಚ್ ಪ್ಯೂ ಎಂಬುವವರು ಇದಕ್ಕಾಗಿ ತಮ್ಮ ಜೀವನದುದ್ದಕ್ಕೂ ಸಂಪಾದಿಸಿದ $20,000 ಮೊತ್ತವನ್ನ ವ್ಯಯಿಸಿದ್ದಾರೆ. ವಿಮಾನದಂತೆ ರೆಕ್ಕೆಗಳು, ಟೈಲ್ಫಿನ್, ಲ್ಯಾಂಡಿಂಗ್ ಗೇರ್ ಮತ್ತು ಇಂಜಿನ್ಗಳೊಂದಿಗೆ ಸಂಪೂರ್ಣವಾಗಿ ಜೆಟ್ ಹೋಲಿಕೆಯಂತೆ ಕಾಂಕ್ರೀಟ್ ವಿಮಾನ ನಿರ್ಮಾಣ ಮಾಡಿದ್ದಾರೆ.
ಸಿಯೆಮ್ ರೀಪ್ ಪಟ್ಟಣದ ಸಮೀಪ ಮನೆ ನಿರ್ಮಾಣ ಮಾಡ್ತಿದ್ದಾರೆ. 43 ವರ್ಷ ವಯಸ್ಸಿನ ಬ್ರಾಚ್ ಪ್ಯೂ ಹೆಂಡತಿಯನ್ನ ಕಳೆದುಕೊಂಡಿದ್ದು ಮೂರು ಮಕ್ಕಳ ತಂದೆ. ಅವರು 30 ವರ್ಷಗಳಿಂದ ಉಳಿಸಿದ ಹಣವನ್ನು ಬಳಸಿಕೊಂಡು ಸುಮಾರು ಒಂದು ವರ್ಷದ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ಜೆಟ್ ಆಕೃತಿಯ ಮನೆಯಲ್ಲಿ ಎರಡು ಮಲಗುವ ಕೋಣೆಗಳು ಮತ್ತು ಎರಡು ಸ್ನಾನಗೃಹಗಳಿದ್ದು ಮನೆಯು ಭತ್ತದ ಗದ್ದೆಯಿಂದ ಆರು ಮೀಟರ್ ಎತ್ತರದ ಕಂಬಗಳ ಮೇಲೆ ನಿಂತಿದೆ.
ಚಿಕ್ಕ ವಯಸ್ಸಿನಿಂದಲೂ ಇದು ನನ್ನ ಕನಸಾಗಿತ್ತು. ಇಂದು ನನ್ನ ಗುರಿಯನ್ನು ಸಾಧಿಸಿದ್ದು ನನಗೆ ಸಂತೋಷವಾಗಿದೆ ಎಂದು ಪ್ಯೂ ಹೇಳಿದರು.
ಇಂಟರ್ನೆಟ್ನಲ್ಲಿ ಖಾಸಗಿ ಜೆಟ್ಗಳ ಲೆಕ್ಕವಿಲ್ಲದಷ್ಟು ವೀಡಿಯೊಗಳನ್ನು ವೀಕ್ಷಿಸಿದ ನಂತರ ಅವರು ಮನೆಯನ್ನು ವಿನ್ಯಾಸಗೊಳಿಸಿದ್ದಾಗಿ ಹೇಳಿದರು. ತಮ್ಮ ಈ ವಿಭಿನ್ನವಾದ ಮನೆಗೆ ಭೇಟಿ ನೀಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಜನರಿಗೆ 50 ಸೆಂಟ್ಗಳಿಂದ $1 ಶುಲ್ಕ ವಿಧಿಸೋದಾಗಿ ಪ್ಯೂ ಹೇಳಿದ್ದಾರೆ.
ಸದ್ಯ ವಿಮಾನದ ಆಕಾರದಲ್ಲಿ ಮನೆ ಕಟ್ಟಿದ್ರೂ ಮುಂದೊಂದು ದಿನ ವಿಮಾನದಲ್ಲಿ ಹಾರುವ ತಮ್ಮ ಕನಸು ಸನಸಾಗುವ ನಿರೀಕ್ಷೆ ಪ್ಯೂಗಿದೆ.
ನನ್ನ ಬಳಿ ಹಣವಿದ್ದರೆ ಮತ್ತು ನಾನು ಎಲ್ಲಿಗೆ ಹೋಗಬೇಕೆಂದು ತಿಳಿದಾಗ, ನಾನು ಅಂದು ವಿಮಾನದಲ್ಲಿ ಹೋಗುತ್ತೇನೆ ಎಂದು ಅವರು ಹೇಳಿದರು