ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಪ್ರಶಾಂತ್ ಸಂಬರಗಿ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಮಾನಹಾನಿಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್ ಬೆಂಗಳೂರು ನಗರದ ಸೈಬರ್ ಅಪರಾಧ ವಿಭಾಗದ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಫೇಸ್ ಬುಕ್ ಖಾತೆಯಲ್ಲಿ ಪ್ರಶಾಂತ್ ಸಂಬರಗಿ ಅವರು ಜೆಡಿಎಸ್ ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿ ಸಾರ್ವಜನಿಕವಾಗಿ ತೇಜೋವಧೆ ಮಾಡಿದ್ದು, ಅವರನ್ನು ತಕ್ಷಣವೇ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಲಾಗಿದೆ.
ಮಾರ್ಚ್ 25ರಂದು ಪ್ರಶಾಂತ್ ಸಂಬರಗಿ ದೇವೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಮಾರ್ಚ್ 11 ಮತ್ತು 15ರಂದು ಕೂಡ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಮಾರ್ಚ್ 13ರಂದು ಕುಮಾರಸ್ವಾಮಿಯವರ ಸಾರ್ವಜನಿಕ ಭಾಷಣದ ತುಣುಕನ್ನು ಪೋಸ್ಟ್ ಮಾಡಿ ಅವಮಾನಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಎಂದು ದೂರು ನೀಡಲಾಗಿದೆ.