ನವದೆಹಲಿ: ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ನಂತರ ಕಾಂಗ್ರೆಸ್ ಭಾನುವಾರ ದೆಹಲಿಯ ರಾಜ್ ಘಾಟ್ ನಲ್ಲಿ ಒಂದು ದಿನದ “ಸಂಕಲ್ಪ ಸತ್ಯಾಗ್ರಹ” ಆರಂಭಿಸಿದೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್, ಪಿ. ಚಿದಂಬರಂ, ಸಲ್ಮಾನ್ ಖುರ್ಷಿದ್, ಜೈರಾಮ್ ರಮೇಶ್, ಮುಕುಲ್ ವಾಸ್ನಿಕ್, ಪವನ್ ಕುಮಾರ್ ಬನ್ಸಾಲ್, ಶಕ್ತಿಸಿನ್ಹ್ ಗೋಹಿಲ್, ಜೋತಿಮಣಿ, ಪ್ರತಿಭಾ ಸಿಂಗ್ ಮತ್ತು ಮನೀಶ್ ಚತ್ರತ್ ಸೇರಿದಂತೆ ಪಕ್ಷದ ಪ್ರಮುಖರು ರಾಜ್‌ಘಾಟ್‌ನಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಕ್ರಮವನ್ನು ಖಂಡಿಸಿದ ಅವರು ಅದಾನಿ ಸಂಸ್ಥೆಯಲ್ಲಿ 20,000 ಕೋಟಿ ರೂಪಾಯಿ ಹೂಡಿಕೆ ಕುರಿತು ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಾಗ ಇಡೀ ಸನ್ನಿವೇಶ ಪ್ರಾರಂಭವಾಯಿತು ಎಂದು ಆರೋಪಿಸಿದರು.
ರಾಹುಲ್ ಗಾಂಧಿಗೆ ಪ್ರಧಾನಿಯ ಮೇಲೂ ಯಾರ ಮೇಲೂ ದ್ವೇಷವಿಲ್ಲ ಎಂದು ಬಣ್ಣಿಸಿದ ಪ್ರಿಯಾಯಾ ಗಾಂಧಿ, ನಾವು ಇವತ್ತಿನವರೆಗೂ ಸುಮ್ಮನಿದ್ದೆವು. ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ದ್ವೇಷಿಸುವುದಿಲ್ಲ, ಸಂಸತ್ತಿನಲ್ಲಿ ಅವರನ್ನು ಅಪ್ಪಿಕೊಂಡರು. ಒಬ್ಬ ವ್ಯಕ್ತಿಯನ್ನು ಎಷ್ಟೆಲ್ಲಾ ಅಗೌರವದಿಂದ ಕಾಣುತ್ತಾರೆ ಎಂದು ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲ ನೀಡುವಲ್ಲಿ ಗಾಂಧಿ ಕುಟುಂಬ ಮಾಡಿರುವ ತ್ಯಾಗವನ್ನು ಸ್ಮರಿಸಿದ ಪ್ರಿಯಾಂಕಾ ಗಾಂಧಿ, “ಈ ದೇಶದ ಪ್ರಜಾಪ್ರಭುತ್ವವು ನನ್ನ ಕುಟುಂಬದ ರಕ್ತದಿಂದ ನೀರಿದೆ, ಅವರು ನಮ್ಮನ್ನು ಅವಮಾನಿಸುವ ಮೂಲಕ ಹೆದರಿಸುತ್ತಾರೆ. ನಾವು ಹೆದರುವುದಿಲ್ಲ ಏಜೆನ್ಸಿಗಳಿಂದ ದಾಳಿ ನಡೆಸುವುದು ತಪ್ಪು ಎಂದರು.
ಇಂದು, ರಾಷ್ಟ್ರದ ಎಲ್ಲಾ ಸಂಪತ್ತನ್ನು ಒಬ್ಬ ವ್ಯಕ್ತಿಗೆ ನೀಡಲಾಗುತ್ತಿದೆ, ಈ ವಿಷಯದ ಬಗ್ಗೆ ಪ್ರಶ್ನೆ ಕೇಳುವುದರಲ್ಲಿ ತಪ್ಪೇನು? ಎಲ್ಲಾ ಸಂಸದರು ಮತ್ತು ಇಡೀ ಸರ್ಕಾರ ಒಬ್ಬ ವ್ಯಕ್ತಿಯನ್ನು ಉಳಿಸುವಲ್ಲಿ ಏಕೆ ನಿರತರಾಗಿದ್ದಾರೆ? ಈ ಅದಾನಿ ಯಾರು? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಹೇಡಿ ಎಂದು ಕರೆದಿರುವ ಅವರು, ದೇಶದ ಪ್ರಧಾನಿ ಒಬ್ಬ ಹೇಡಿ, ಅವರನ್ನು ಜೈಲಿಗೆ ಕಳುಹಿಸಿ, ಅವರು ತಮ್ಮ ಅಧಿಕಾರದ ಹಿಂದೆ ಅಡಗಿದ್ದಾರೆ, ಅವರು ದುರಹಂಕಾರಿ ಎಂದು ಹೇಳಿದರು.
ಬಿಜೆಪಿ ತನ್ನ ಕುಟುಂಬವನ್ನು ಅವಮಾನಿಸಿದ ವಿವಿಧ ನಿದರ್ಶನಗಳನ್ನು ಉಲ್ಲೇಖಿಸಿದ ಪ್ರಿಯಾಂಕಾ, ಮೋದಿ ಅವರು ಸಂಸತ್ತಿನಲ್ಲಿ ನನ್ನ ಹುತಾತ್ಮ ತಂದೆಯನ್ನು ಅವಮಾನಿಸಿದ್ದಾರೆ, ನೀವು ನನ್ನ ಸಹೋದರನನ್ನು ಹುತಾತ್ಮರ ಮಗ, ದೇಶದ್ರೋಹಿ ಮತ್ತು ಮೀರ್ ಜಾಫರ್ ಎಂದು ಕರೆಯುತ್ತೀರಿ, ನೀವು ಅವರ ತಾಯಿಯನ್ನು ಅವಮಾನಿಸುತ್ತೀರಿ. ನಿಮ್ಮ ಮುಖ್ಯಮಂತ್ರಿ ರಾಹುಲ್ ಗಾಂಧಿಗೆ ಅವರ ತಾಯಿ ಯಾರೆಂದು ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ, ನೀವು ಪ್ರತಿದಿನ ನನ್ನ ಕುಟುಂಬವನ್ನು ಅವಮಾನಿಸುತ್ತಿದ್ದೀರಿ, ಆದರೆ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಹೇಳಿಕೆ ನೀಡಿದ ನಂತರವೂ ಪ್ರಧಾನಿಯವರ ಲೋಕಸಭಾ ಸದಸ್ಯತ್ವ ಯಥಾಸ್ಥಿತಿಯಲ್ಲಿದೆ. ನಿಮ್ಮ ವಿರುದ್ಧ ಯಾವುದೇ ಪ್ರಕರಣವಿಲ್ಲ, ನಿಮ್ಮ ಸದಸ್ಯತ್ವವನ್ನು ರದ್ದುಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.