ವಾಟ್ಸಾಪ್ ಗ್ರೂಪ್ ಒಂದರಲ್ಲಿ ಧರ್ಮವಿರೋಧಿ ಕಂಟೆಂಟ್ ಕಳುಹಿಸಿದ ಆಪಾದನೆ ಮೇಲೆ ಪಾಕಿಸ್ತಾನದ ವ್ಯಕ್ತಿಯೊಬ್ಬನಿಗೆ ಅಲ್ಲಿನ ಭಯೋತ್ಪಾದನಾ-ನಿಗ್ರಹ ನ್ಯಾಯಾಲಯವೊಂದು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಸಯ್ಯದ್ ಮುಹಮ್ಮದ್ ಜೀಶಾನ್ ಹೆಸರಿನ ಈ ವ್ಯಕ್ತಿ ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಮರ್ದಾನ್ ಪ್ರದೇಶದವರಾಗಿದ್ದಾರೆ. ಎಲೆಕ್ಟ್ರಾನಿಕ್ ಅಪರಾಧಗಳ ನಿಯಂತ್ರಣ ಕಾಯಿದೆ ಹಾಗೂ ಭಯೋತ್ಪಾದನಾ ನಿಗ್ರಹ ಕಾಯಿದೆ ಅಡಿ ಈತನಿಗೆ ಶಿಕ್ಷೆ ವಿಧಿಸಲಾಗಿದೆ.
ಮರಣ ದಂಡನೆಗೂ ಮುನ್ನ ಜೈಲಿನಲ್ಲಿ 23 ವರ್ಷಗಳ ಕಾಲ ಶಿಕ್ಷೆ ಹಾಗೂ $4,300ನಷ್ಟು ದಂಡವನ್ನು ಜೀಶಾನ್‌ಗೆ ವಿಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಜೀಶಾನ್‌ಗೆ ಇದೆ ಎಂದು ಆತನ ಪರ ವಕೀಲರು ತಿಳಿಸಿದ್ದಾರೆ.
ಜೀಶಾನ್ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಧರ್ಮವಿರೋಧಿ ಕಂಟೆಂಟ್ ಪೋಸ್ಟ್ ಮಾಡುತ್ತಿದ್ದರು ಎಂದು ಆಪಾದಿಸಿ ಕೇಂದ್ರೀಯ ತನಿಖಾ ಸಂಸ್ಥೆಗೆ (ಎಫ್‌ಐಎ) ದೂರು ನೀಡಲಾಗಿತ್ತು. ಇದರ ಅನ್ವಯ ತನಿಖೆ ನಡೆಸಲಾಗಿದೆ. ಜೀಶಾನ್‌ನ ಸೆಲ್ ಫೋನ್‌ನ ವಿಧಿ ವಿಜ್ಞಾನ ಪರೀಕ್ಷೆಯ ವೇಳೆ ಆತ ತಪ್ಪಿತಸ್ಥ ಎಂದು ಸಾಬೀತಾಗಿದೆ ಎಂದು ಎಫ್‌ಐಎ ತಿಳಿಸಿದೆ.
ಧರ್ಮವಿರೋಧಿ ಚಟುವಟಿಕೆಗಳಿಗೆ ಮರಣ ದಂಡನೆ ವಿಧಿಸುವ ಸಾಧ್ಯತೆಯನ್ನು ಪಾಕಿಸ್ತಾನದ ಕಾನೂನುಗಳು ಹೊಂದಿವೆ. ಖುದ್ದು ಮುಸ್ಲಿಮರೇ ಅನ್ಯ ಮುಸ್ಲಿಮರ ವಿರುದ್ಧ ಆಪಾದನೆ ಮಾಡುವುದು ಸಹ ಸಾಮಾನ್ಯವಾಗಿದೆ. ಇದೇ ವೇಳೆ, ಧಾರ್ಮಿಕ ಅಲ್ಪಸಂಖ್ಯಾತರು, ಅದರಲ್ಲೂ ಕ್ರಿಶ್ಚಿಯನ್ನರು, ಪದೇ ಪದೇ ಈ ಕಾಯಿದೆಯಡಿ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ, ವೈಯಕ್ತಿಕ ಹಗೆ ತೀರಿಸಿಕೊಳ್ಳಲು ಧರ್ಮವಿರೋಧಿ ಕಾಯಿದೆಯ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಕಳೆದ ಎರಡು ದಶಕಗಳಲ್ಲಿ ಇದೇ ಧರ್ಮವಿರೋಧಿ ಆರೋಪವನ್ನು 774 ಮುಸ್ಲಿಮರು ಹಾಗೂ 760 ಮುಸ್ಲಿಮೇತರರು ಎದುರಿಸಬೇಕಾಗಿ ಬಂದಿದೆ ಎಂದು ಪಾಕಿಸ್ತಾನ ಮಾನವ ಹಕ್ಕುಗಳು ಮತ್ತು ನ್ಯಾಯಾಂಗ ನೆರವು ಸಂಸ್ಥೆ ’ನ್ಯಾಷನಲ್ ಕಮಿಷನ್ ಆಪ್ ಜಸ್ಟೀಸ್ ಅಂಡ್ ಪೀಸ್’ ತಿಳಿಸಿದೆ.