ಅಪರೂಪದ ಸಿಂಡ್ರೋಮ್ ನಿಂದಾಗಿ ಮಹಿಳೆಯೊಬ್ಬರು ಒಂದು ವರ್ಷದವರೆಗೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗದೇ ನೋವು ಅನುಭವಿಸಿದ್ದಾರೆ.
ಲಂಡನ್ ಮೂಲದ ಕಂಟೆಂಟ್ ಕ್ರಿಯೇಟರ್, 30 ವರ್ಷದ ಎಲ್ಲೆ ಆಡಮ್ಸ್ ಈ ತೊಂದರೆಗೆ ಸಿಲುಕಿದ್ದರು. ಒಂದು ದಿನ ಎಚ್ಚರಗೊಂಡ ಆಕೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನ ಕಂಡುಕೊಂಡಿದ್ದಾರೆ. ಎಷ್ಟೇ ನೀರು ಕುಡಿದ್ರೂ, ದ್ರವ ಸೇವಿಸಿದ್ರೂ ಆಕೆಗೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಲಿಲ್ಲ.
ಅಕ್ಟೋಬರ್ 2020 ರಲ್ಲಿ, ಆಡಮ್ಸ್ ಮೂತ್ರ ವಿಸರ್ಜಿಸಲು ಸಾಧ್ಯವಾಗದಿರುವ ಬಗ್ಗೆ ಗೊತ್ತಾಗಿ ತುಂಬಾ ಚಿಂತಿತರಾದರು. ಇದರ ನಂತರ, ಅವರು ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಗೆ ಹೋದಾಗ ಅಲ್ಲಿ ಆಕೆಯ ಮೂತ್ರಕೋಶದಲ್ಲಿ ಒಂದು ಲೀಟರ್ ಮೂತ್ರವಿರುವುದು ಗೊತ್ತಾಯಿತು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಮೂತ್ರಕೋಶದ ಸಾಮರ್ಥ್ಯವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ವರೆಗೆ ಇರುತ್ತದೆ.
ಈ ಬಗ್ಗೆ ಅಚ್ಚರಿಗೊಂಡ ವೈದ್ಯರು ಆಕೆಯ ದೇಹದಿಂದ ಮೂತ್ರವನ್ನು ಹೊರಹಾಕಲು ತುರ್ತು ಕ್ಯಾತಿಟರ್ನೊಂದಿಗೆ ಆಕೆಯ ಮೂತ್ರಕೋಶಕ್ಕೆ ಟ್ಯೂಬ್ ಹಾಕಲಾಯಿತು.
ಅನೇಕ ಆಸ್ಪತ್ರೆಯ ತಪಾಸಣೆಗಳು ಮತ್ತು ಮೂತ್ರಶಾಸ್ತ್ರಜ್ಞರೊಂದಿಗೆ ಅಪಾಯಿಂಟ್‌ಮೆಂಟ್‌ಗಳ ಹೊರತಾಗಿಯೂ ಆಕೆಗಿರುವ ಸಮಸ್ಯೆ ಏನೆಂಬುದು ತಿಳಿಯಲಿಲ್ಲ. ಹೀಗಾಗಿ ಎಲ್ಲೆ ಆಡಮ್ಸ್ ಮನೆಯಲ್ಲಿ ಸ್ವಯಂ-ಕ್ಯಾತಿಟರ್ ಮಾಡುವುದು ಹೇಗೆಂದು ಕಲಿತಳು.
14 ತಿಂಗಳ ನಂತರ ಡಿಸೆಂಬರ್ 2021 ರಲ್ಲಿ ಆಡಮ್ಸ್ ಗೆ ಫೌಲರ್ ಸಿಂಡ್ರೋಮ್ ಇರುವುದು ಪತ್ತೆಯಾಯಿತು. ಆಗ ಆಕೆ ಎಲ್ಲಾ ರೀತಿಯ ಔಷಧಿಗಳನ್ನು ಪ್ರಯತ್ನಿಸಿದಳು. ಆದರೆ ಏನೂ ಪ್ರಯೋಜನವಾಗಲಿಲ್ಲ. ಆಡಮ್ಸ್ ತನ್ನ ಉಳಿದ ಜೀವನದುದ್ದಕ್ಕೂ ಮೂತ್ರ ವಿಸರ್ಜಿಸಲು ಕ್ಯಾತಿಟರ್ ಅನ್ನು ಬಳಸಬೇಕಾಗುತ್ತದೆ.
ಫೌಲರ್ ಸಿಂಡ್ರೋಮ್ ಎಂದರೆ ಮೂತ್ರ ವಿಸರ್ಜಿಸಲು ಅಥವಾ ಮೂತ್ರಕೋಶವನ್ನು ಖಾಲಿ ಮಾಡಲು ಅಸಮರ್ಥತೆ. ಸದ್ಯ ಆಡಮ್ಸ್ ಕ್ಯಾತಿಟರ್ ಮೇಲೆ ಅವಲಂಬಿತರಾಗಿದ್ದಾರೆ.