ಕೆಲವೊಂದು ಸರ್ಕಾರಿ ಆಸ್ಪತ್ರೆಗಳ ಹದಗೆಟ್ಟಿರೋ ಪರಿಸ್ಥಿತಿ ನೋಡ್ತಿದ್ರೆ, ಚಿಕಿತ್ಸೆಗೆಂದು ಹೋದವರು ನೇರವಾಗಿ ಮಸಣಕ್ಕೆನೇ ಸೇರಿ ಬಿಡ್ತಾರೆ. ಮಧ್ಯಪ್ರದೇಶದ ಗ್ವಾಲಿಯರ್ ಸರ್ಕಾರಿ ಆಸ್ಪತ್ರೆ ಕಂಡಿಶನ್ ಹೇಗಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಅಲ್ಲ ಕೆಲ ಖಾಸಗಿ ಆಸ್ಪತ್ರೆಗಳೂ, ಲಕ್ಷ-ಲಕ್ಷ ವಸೂಲಿ ಮಾಡಿಕೊಂಡರೂ, ರೋಗಿಗಳನ್ನ ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಿಕೊಳ್ತಿರ್ತಾರೆ.
ಗ್ವಾಲಿಯರ್‌ನಲ್ಲಿರುವ ಜಿಆರ್‌ಎಂಸಿ ಗ್ರೂಪ್ ನ ಜಯ ಆರೋಗ್ಯ ಆಸ್ಪತ್ರೆಯ ಕ್ಯಾಮರಾ ಒಂದರಲ್ಲಿ ರೆಕಾರ್ಡ್ ಆದ ದೃಶ್ಯ, ಅಲ್ಲಿ ವ್ಯವಸ್ಥೆ ಹೇಗಿದೆ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ. ಇಲ್ಲಿ ಮಹಿಳೆಯೊಬ್ಬರು ತಮ್ಮ ಮಾವನನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ರೋಗಿ ಕಾಲು ಮುರಿದುಕೊಂಡಿದ್ದರಿಂದ ಆತ ನಡೆಯಲು ಅಸಮರ್ಥನಾಗಿದ್ದ. ಆದ್ದರಿಂದ ಆ ಮಹಿಳೆ ಅಲ್ಲಿ ಸ್ಟ್ರೆಚರ್ ಹುಡುಕುತ್ತಾಳೆ. ಆಕೆಗೆ ಸಿಗದೇ ಹೋದಾಗ ಆಕೆ ಹಾಸಿಗೆ ಮೇಲಿದ್ದ ಬೆಡ್‌ಶಿಟ್ ಒಂದನ್ನ ತೆಗೆದುಕೊಂಡು ಅದರ ಮೇಲೆ, ತನ್ನ ಮಾವನನ್ನ ಕುಳಿತುಕೊಳ್ಳಲು ಹೇಳಿ, ಹಾಗೆಯೇ ಎಳೆದುಕೊಂಡು ಹೋಗುತ್ತಾಳೆ.
ಈ ವಿಡಿಯೋ ಈಗ ವೈರಲ್ ಆಗಿದ್ದು, ಗಜರಾಜ್ ವೈದ್ಯಕೀಯ ಕಾಲೇಜಿನ (GRMC) ವ್ಯವಸ್ಥಾಪಕರಾದ ಅಕ್ಷಯ್‌ನಿಗಮ್ ಅವರ ಗಮನಕ್ಕೆ ಬಂದಿದೆ. ಅವರು ಈಗ ಈ ಅವ್ಯವಸ್ಥೆಗೆ ಕಾರಣ ಆದವರ ಮೇಲೆ ಕಠಿಣ ಕ್ರಮವನ್ನ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಈ ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ವಿಭಾಗಗಳಿವೆ. ಪ್ರತಿ ವಿಭಾಗದಲ್ಲೂ ರೋಗಿಗಳಿಗೆ ಯಾವುದೇ ಸಮಸ್ಯೆ ಕಾಡದಂತೆ ನೋಡಿಕೊಳ್ಳಲಾಗಿದೆ. ಈ ಹೊಸ ಆಸ್ಪತ್ರೆಯಲ್ಲಿ ಏನಿಲ್ಲ ಅಂದರೂ ಸದ್ಯಕ್ಕೆ 60-70 ಸ್ಟ್ರೆಚರ್ ವ್ಯವಸ್ಥೆಗಳನ್ನ ಮಾಡಲಾಗಿದೆ. ಅಷ್ಟೆ ಅಲ್ಲ ಹೆಚ್ಚುವರಿಯಾಗಿ ಎಮರ್ಜನ್ಸಿ ಗೇಟ್ ಬಳಿ ಸದಾ 10 ಸ್ಟ್ರೆಚರ್ ಇರಿಸಲಾಗಿದೆ. ಆದರೂ ರೋಗಿಗಳು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಅನ್ನೋದು ವಿಪರ್ಯಾಸ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಾ. ನಿಗಮ್ ಮಾಧ್ಯಮಕ್ಕೆ ಹೇಳಿದ್ದಾರೆ.