ದ್ರಾಕ್ಷಿ ಹಣ್ಣಿನ ಸೀಸನ್ ಶುರುವಾಗಿದೆ. ಮಕ್ಕಳಿಗಂತೂ ಇದು ಫೇವರಿಟ್. ಬಹುತೇಕ ಎಲ್ಲರೂ ದ್ರಾಕ್ಷಿಯನ್ನು ತಿನ್ನಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಪ್ಪು ದ್ರಾಕ್ಷಿಯ ಬೆಲೆ ಹಸಿರು ದ್ರಾಕ್ಷಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಎರಡೂ ಬಗೆಯ ದ್ರಾಕ್ಷಿಯ ರುಚಿ ಕೂಡ ಕೊಂಚ ಭಿನ್ನವಾಗಿರುತ್ತದೆ. ಆದರೆ ಕಪ್ಪು ದ್ರಾಕ್ಷಿ ದುಬಾರಿ ಏಕೆ ಎಂಬ ಪ್ರಶ್ನೆ ಸಹಜ. ಕಪ್ಪು ದ್ರಾಕ್ಷಿಯಲ್ಲಿ ಅಂಥದ್ದೇನಿದೆ ಅನ್ನೋದನ್ನು ನೋಡೋಣ.
ಕಪ್ಪು ದ್ರಾಕ್ಷಿ ಏಕೆ ದುಬಾರಿ?
ಕಪ್ಪು ದ್ರಾಕ್ಷಿಯ ಬೆಲೆ ಹಸಿರುಗಿಂತ ಹೆಚ್ಚಿರುವುದಕ್ಕೆ ಹಲವು ಕಾರಣಗಳಿವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಅದರ ಉತ್ಪಾದನೆಯ ಪ್ರಕ್ರಿಯೆ ಸ್ವಲ್ಪ ಸಂಕೀರ್ಣವಾಗಿದೆ. ಕಪ್ಪು ದ್ರಾಕ್ಷಿಯನ್ನು ಎಲ್ಲಾ ಕಾಲದಲ್ಲೂ ಬೆಳೆಯಲು ಸಾಧ್ಯವಿಲ್ಲ. ವಿಶೇಷ ಹವಾಮಾನ ಪರಿಸ್ಥಿತಿಗಳು ಮತ್ತು ವಿಶೇಷ ಮಣ್ಣಿನ ಅಗತ್ಯವಿದೆ. ಅದನ್ನು ತುಂಬಾ ಶೀತ ಮತ್ತು ಬಿಸಿಲಿನ ವಾತಾವರಣದಲ್ಲಿ ಬೆಳೆಸಲು ಸಾಧ್ಯವಿಲ್ಲ.
ಕಪ್ಪು ದ್ರಾಕ್ಷಿಗೆ ತುಲನಾತ್ಮಕವಾಗಿ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ. ವೆಚ್ಚ ಮತ್ತು ಇಳುವರಿ ಲೆಕ್ಕಾಚಾರದಿಂದಾಗಿ ಕಪ್ಪು ದ್ರಾಕ್ಷಿಯ ಬೆಲೆ ಹೆಚ್ಚು. ಹಸಿರು ದ್ರಾಕ್ಷಿಗಿಂತ ಕಪ್ಪು ದ್ರಾಕ್ಷಿಗೆ ಬೇಡಿಕೆ ಹೆಚ್ಚಿದೆ. ಆದರೆ ಅದರ ಪೂರೈಕೆಯು ಬೇಡಿಕೆಗೆ ತಕ್ಕಂತಿಲ್ಲ. ಹಾಗಾಗಿ ಇದು ಗ್ರಾಹಕರ ಜೇಬಿಗೆ ಕೊಂಚ ಹೊರೆಯಾಗುತ್ತದೆ. ಕಪ್ಪು ದ್ರಾಕ್ಷಿಯನ್ನು ಸಾಮಾನ್ಯವಾಗಿ ಕೈಯಿಂದ ಕೀಳಲಾಗುತ್ತದೆ. ಅದೇ ಕೆಲಸವನ್ನು ಯಂತ್ರದಿಂದ ಮಾಡಿದರೆ ವೆಚ್ಚ ಸ್ವಲ್ಪ ಕಡಿಮೆಯಾಗುತ್ತದೆ. ಕಪ್ಪು ದ್ರಾಕ್ಷಿಯ ವಿಶೇಷ ರೀತಿಯ ಪ್ಯಾಕಿಂಗ್ ಕೂಡ ದುಬಾರಿಯಾಗಲು ಕಾರಣವಾಗಿದೆ.
ಕಪ್ಪು ದ್ರಾಕ್ಷಿ ಆರೋಗ್ಯಕ್ಕೂ ಪ್ರಯೋಜನಕಾರಿ
ಬೆಲೆ ಏರಿಕೆಗೆ ಮತ್ತೊಂದು ಕಾರಣವೆಂದರೆ ಕಪ್ಪು ದ್ರಾಕ್ಷಿಯಲ್ಲಿರುವ ಆರೋಗ್ಯ ಪ್ರಯೋಜನಗಳು. ಇದರಲ್ಲಿ ಎಂಟಿಒಕ್ಸಿಡೆಂಟ್‌ಗಳು ಸೇರಿದಂತೆ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದರಲ್ಲಿರುವ ಪೊಟ್ಯಾಸಿಯಮ್ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಇ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ದುರ್ಬಲ ದೃಷ್ಟಿ ಇರುವವರು ಈ ಹಣ್ಣನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸಬಹುದು.