
13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಈ ಮಹತ್ವದ ತೀರ್ಪು ಹೊರ ಬಿದ್ದಿದೆ.
ಪ್ರಕರಣದ ವಿವರ: 2019ರಲ್ಲಿ ಭದ್ರಾವತಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ವ್ಯಕ್ತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಹಿನ್ನೆಲೆಯಲ್ಲಿ ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಭದ್ರಾವತಿ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ನಂಜಪ್ಪ ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಎಚ್.ಸಿ. ಜಯಕಲಾ ತನಿಖಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಎಸ್. ಮೋಹನ್ ಈಗ ತೀರ್ಪು ಪ್ರಕಟಿಸಿದ್ದು, 20 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಅಲ್ಲದೆ ಅಪರಾಧಿ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸರ್ಕಾರಿ ವಕೀಲ ಹರಿಪ್ರಸಾದ್ ಸಂತ್ರಸ್ತೆ ಪರವಾಗಿ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದರು.