ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿ ಗಳಿಗೆ ಮಾರ್ಚ್ 27ರಿಂದ ಬೋರ್ಡ್ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳನ್ನು ಮುಂದೂಡಬೇಕೆಂದು ರಾಜ್ಯ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ಮತ್ತೆ ತಿರಸ್ಕರಿಸಿದೆ.
ಬೋರ್ಡ್ ಪರೀಕ್ಷೆ ನಡೆಸುವ ಕುರಿತಾಗಿ ಹೋರಾಡಿಸಲಾದ ಸುತ್ತೋಲೆ ರದ್ದುಪಡಿಸಿ ಏಕ ಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿ ನ್ಯಾಯಮೂರ್ತಿ ಜಿ ನರೇಂದರ್ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.
ರಾಜ್ಯ ಶಿಕ್ಷಣ ಇಲಾಖೆ 5 ಮತ್ತು ಎಂಟನೇ ತರಗತಿ ಗಳಿಗೆ ಮಾರ್ಚ್ 27 ರಿಂದ ಬೋರ್ಡ್ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಹೈಕೋರ್ಟ್ ಆದೇಶ ಪ್ರಶ್ನೆಸಿ ಖಾಸಗಿ ಶಾಲೆಗಳು, ಖಾಸಗಿ ಶಾಲೆಗಳ ಮಕ್ಕಳ ಪೋಷಕರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಮಾರ್ಚ್ 27ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗುತ್ತದೆ. ಪರೀಕ್ಷೆ ಮತ್ತು ವಿಚಾರಣೆ ಒಂದೇ ದಿನ ನಡೆಯುವುದರಿಂದ ಪರೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿತ್ತು.
ಪ್ರಸ್ತುತ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇರುವುದರಿಂದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಯಾವುದೇ ತೀರ್ಮಾನ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಪರೀಕ್ಷೆ ಮುಂದೂಡಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ.