ಮಹಾತ್ಮ ಗಾಂಧಿಯವರು ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರತಿಪಾದಿಸಿದ್ದಾರೆ.
ತಮ್ಮ ಭಾಷಣದಲ್ಲಿ “ಗಾಂಧೀಜಿ ಕಾನೂನು ಪದವಿ ಪಡೆದಿದ್ದರು ಎಂಬ ತಪ್ಪು ಕಲ್ಪನೆ ಇದೆ. ಅವರು ಯಾವುದೇ ವಿಶ್ವವಿದ್ಯಾಲಯದ ಒಂದೇ ಒಂದು ಪದವಿಯನ್ನೂ ಹೊಂದಿಲ್ಲ ಎಂದು ನಿಮಗೆ ತಿಳಿದಿದೆಯೇ ? ಅವರ ಏಕೈಕ ಅರ್ಹತೆ ಹೈಸ್ಕೂಲ್ ಡಿಪ್ಲೊಮಾ. ಮಹಾತ್ಮ ಗಾಂಧಿ ಅವರು ಕಾನೂನು ಅಭ್ಯಾಸ ಮಾಡಲು ಅರ್ಹರಾಗಿದ್ದರು. ಆದರೆ ಕಾನೂನು ಪದವಿ ಪಡೆದಿರಲಿಲ್ಲ. ಅವರು ಯಾವುದೇ ಪದವಿ ಹೊಂದಿಲ್ಲ ಆದರೆ ಅವರು ಹೇಗೆ ವಿದ್ಯಾವಂತರಾಗಿದ್ದರು” ಎಂದು ಹೇಳಿದ್ದಾರೆ.
ಅಧಿಕೃತ ದಾಖಲೆಗಳ ಪ್ರಕಾರ, ಮಹಾತ್ಮ ಗಾಂಧಿಯವರು ಆರಂಭದಲ್ಲಿ ಗುಜರಾತ್‌ನ ಸಮಲ್ದಾಸ್ ಕಲಾ ಕಾಲೇಜಿನಿಂದ ಹೊರಗುಳಿದರೂ, ಅವರು ಯೂನಿವರ್ಸಿಟಿ ಕಾಲೇಜ್ ಲಂಡನ್ (UCL) ಗೆ ಸೇರಿಕೊಂಡರು. 3 ವರ್ಷಗಳ ನಂತರ ತಮ್ಮ ಕಾನೂನು ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಮನೋಜ್ ಸಿನ್ಹಾ ಅವರು ಗಾಂಧಿಯವರ ಸತ್ಯದ ತತ್ವದ ಬಗ್ಗೆ ಮಾತನಾಡುತ್ತಾ, “ಗಾಂಧಿ ಅವರು ರಾಷ್ಟ್ರಕ್ಕಾಗಿ ಬಹಳಷ್ಟು ಮಾಡಿದ್ದಾರೆ. ಆದರೆ ಸಾಧಿಸಿದ್ದೆಲ್ಲವೂ ಅದರ ಕೇಂದ್ರ ಬಿಂದು ಸತ್ಯವಾಗಿತ್ತು. ನೀವು ಅವರ ಜೀವನದ ಎಲ್ಲಾ ಅಂಶಗಳನ್ನು ನೋಡಿದರೆ, ಅವರ ಜೀವನದಲ್ಲಿ ಸತ್ಯವನ್ನು ಹೊರತುಪಡಿಸಿ ಏನೂ ಇರಲಿಲ್ಲ. ಏನೇ ಸವಾಲುಗಳಿದ್ದರೂ, ಮಹಾತ್ಮ ಗಾಂಧಿ ಎಂದಿಗೂ ಸತ್ಯವನ್ನು ತ್ಯಜಿಸಲಿಲ್ಲ ಮತ್ತು ಅವರ ಆಂತರಿಕ ಧ್ವನಿಯನ್ನು ಗುರುತಿಸಿದರು. ಪರಿಣಾಮವಾಗಿ ಅವರು ರಾಷ್ಟ್ರಪಿತರಾದರುʼ ಎಂದರು.
ದೇಶದ ಪ್ರಧಾನಿ ವಿದ್ಯಾವಂತರಲ್ಲ ಎಂದು ನಾನು ಚಿಂತೆ ಮಾಡುತ್ತೇನೆ ಎಂದಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆಯ ಒಂದು ದಿನದ ನಂತರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.