ರಾಜಸ್ಥಾನದ ರಾಜಧಾನಿ ಜೈಪುರ ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದಿದೆ. ರಜಾದಿನಗಳಲ್ಲಿ ಪ್ರವಾಸ ಕೈಗೊಳ್ಳಲು ಇದು ಹೇಳಿ ಮಾಡಿಸಿದಂತಹ ತಾಣ. ಇಲ್ಲಿನ ಅರಮನೆಗಳು ಮತ್ತು ಹಳೆಯ ಕಟ್ಟಡಗಳಲ್ಲಿ ಬಳಸಿರುವ ಗುಲಾಬಿ ಧೋಲ್ಪುರಿ ಕಲ್ಲುಗಳು ಗಮನ ಸೆಳೆಯುತ್ತವೆ. ಪಿಂಕ್ ಸಿಟಿ ಜೈಪುರ, ವಿಶ್ವದ ಸುಂದರ ಮತ್ತು ಐತಿಹಾಸಿಕ ನಗರಗಳಲ್ಲಿ ಗುರುತಿಸಿಕೊಂಡಿದೆ. ಜೈಪುರವನ್ನು 1727ರಲ್ಲಿ ಮಹಾರಾಜ ಸವಾಯಿ ಜೈ ಸಿಂಗ್ II ಸ್ಥಾಪಿಸಿದರು.
ಅಂದಹಾಗೆ ಮೂರು ಶತಮಾನಗಳಿಂದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ನಿಭಾಯಿಸುತ್ತಿರುವ ಜೈಪುರದ ಪ್ರತಿಯೊಂದು ಮೂಲೆಯೂ ನೋಡಬೇಕಾದದ್ದು. ಜೈಪುರವನ್ನು ಹತ್ತಿರದಿಂದ ನೋಡಬಯಸಿದರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಬೇಕು.
ಸಿಟಿ ಪ್ಯಾಲೇಸ್, ಜೈಪುರ- ಸಿಟಿ ಪ್ಯಾಲೇಸ್ ಜೈಪುರದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇಲ್ಲಿರುವ ವಸ್ತುಸಂಗ್ರಹಾಲಯವು ರಾಜಸ್ಥಾನಿ ವೇಷಭೂಷಣಗಳು ಮತ್ತು ಮೊಘಲರು ಮತ್ತು ರಜಪೂತರ ಆಯುಧಗಳ ಅತ್ಯುತ್ತಮ ಸಂಗ್ರಹವನ್ನು ಹೊಂದಿದೆ. ಇದರ ಹೊರತಾಗಿ, ದಿವಾನ್-ಎ-ಖಾಸ್ ಮತ್ತು ದಿವಾನ್-ಎ-ಆಮ್, ಸಿಲ್ಹ್ ಖಾನಾ (ಕ್ವೀನ್ಸ್ ಪ್ಯಾಲೇಸ್) ಮತ್ತು ಪ್ರೀತಮ್ ನಿವಾಸ್ ಚೌಕ್ (ನಾಲ್ಕು ದೊಡ್ಡ ಗೇಟ್‌ಗಳನ್ನು ಹೊಂದಿರುವ ಪ್ರಾಂಗಣ), ಇವೆಲ್ಲವೂ ಸಿಟಿ ಪ್ಯಾಲೇಸ್‌ನ ವಿಶೇಷತೆ.
ನಹರ್‌ಗಢ್ ಕೋಟೆ ಜೈಪುರ- ಜೈಪುರದ ಪ್ರಸಿದ್ಧ ಕೋಟೆಗಳಲ್ಲಿ ನಹರ್‌ಘಢ್ ಕೋಟೆಯೂ ಸೇರಿದೆ. ಇಲ್ಲಿಂದ ನೀವು ಸುಂದರವಾದ ಜೈಪುರ ನಗರವನ್ನು ನೋಡಬಹುದು. ಇದು ಅಮೇರ್ ಕೋಟೆ ಮತ್ತು ಜೈಘರ್ ಕೋಟೆಯ ನಡುವೆ ಇದೆ.
ಜೈಘರ್ ಕೋಟೆ – 1726ರಲ್ಲಿ ಮಹಾರಾಜ ಜೈಸಿಂಗ್ II ಈ ಕೋಟೆಯನ್ನು ನಿರ್ಮಿಸಿದರು. ಈ ಐತಿಹಾಸಿಕ ಕೋಟೆಯನ್ನು ನೋಡಲು ನೀವು ಹೋಗಲೇಬೇಕು. ಇಲ್ಲಿ ರಾಜ-ಮಹಾರಾಜರ ಕಾಲದ ಅನೇಕ ಆಯುಧಗಳನ್ನು ನೋಡಬಹುದು. ವಿಶ್ವದ ಅತಿ ದೊಡ್ಡ ಫಿರಂಗಿಯನ್ನೂ ಇಲ್ಲಿ ಇರಿಸಲಾಗಿದೆ.
ಅಮೇರ್ ಕೋಟೆ– ರವ್ಲಿ ಬೆಟ್ಟದ ತುದಿಯಲ್ಲಿರುವ ಅಮೇರ್ ಕೋಟೆಯು ತನ್ನ ವಾಸ್ತುಶಿಲ್ಪ ಕಲೆ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಕೋಟೆಯು ಗುಲಾಬಿ ಮತ್ತು ಹಳದಿ ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ. ಇಂಡೋ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಜೋಧಾ ಅಕ್ಬರ್ ಮತ್ತು ಮುಘಲ್-ಎ-ಆಜಮ್ ಸೇರಿದಂತೆ ಹಲವು ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.
ಹವಾ ಮಹಲ್ ಜೈಪುರ–ಹವಾ ಮಹಲ್ ಜೈಪುರದ ಪ್ರಮುಖ ಆಕರ್ಷಣೆಯಾಗಿದೆ. ಇದು ರಾಜಸ್ಥಾನದ ಅತ್ಯಂತ ಹಳೆಯ ಕಟ್ಟಡಗಳಲ್ಲಿ ಒಂದು. ಈ ಅರಮನೆಯಲ್ಲಿ 953 ಕಿಟಕಿಗಳಿದ್ದು, ಇವುಗಳನ್ನು ಜಾಲರಿಗಳ ಸಹಾಯದಿಂದ ಅಲಂಕರಿಸಲಾಗಿದೆ. ಈ ಆಕರ್ಷಕ ಕಿಟಕಿಗಳಿಂದಾಗಿ ಇದನ್ನು ಗಾಳಿಯ ಅರಮನೆ ಎಂದೂ ಕರೆಯುತ್ತಾರೆ. ಅರಮನೆಯು ಸುಂದರವಾದ ಕೆಂಪು ಮತ್ತು ಗುಲಾಬಿ ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ. ಇದು ಐದು ಅಂತಸ್ತಿನ ಪಿರಮಿಡ್‌ನಂತೆ ಕಾಣುತ್ತದೆ.
ಜಲ ಮಹಲ್ ಜೈಪುರ– ಜೈಪುರದ ಮಾನಸಾಗರ್ ಸರೋವರದ ಮಧ್ಯದಲ್ಲಿ ನೆಲೆಗೊಂಡಿರುವ ಜಲ ಮಹಲ್, ಪ್ರಸಿದ್ಧ ಐತಿಹಾಸಿಕ ಅರಮನೆಯಾಗಿದೆ. ಇಲ್ಲಿನ ಐದು ಮಹಡಿಗಳಲ್ಲಿ ಒಂದು ಮಾತ್ರ ನೀರಿನ ಮೇಲ್ಮೈ ಮೇಲಿದೆ, ಉಳಿದ ನಾಲ್ಕು ನೀರಿನ ಅಡಿಯಲ್ಲಿವೆ. ಈ ಕಾರಣದಿಂದಾಗಿ ಅರಮನೆಗೆ ಶಾಖವೇ ತಗುಲುವುದಿಲ್ಲ. ಜಲಮಹಲ್ ಈಗ ಪಕ್ಷಿಧಾಮವಾಗಿಯೂ ಅಭಿವೃದ್ಧಿ ಹೊಂದುತ್ತಿದೆ.
ಚೌಖಿ ಧನಿ- ರಾಜಸ್ಥಾನಿ ಕಲೆ ಮತ್ತು ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಚೌಕಿ ಧನಿ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ಜಾನಪದ ಹಾಡುಗಳು, ಜಾನಪದ ನೃತ್ಯಗಳು ಮತ್ತು ಬೊಂಬೆ ಪ್ರದರ್ಶನಗಳೊಂದಿಗೆ ರುಚಿಕರವಾದ ರಾಜಸ್ಥಾನಿ ಆಹಾರವನ್ನು ಸಹ ಸವಿಯಬಹುದು.
ಈ ನಗರವನ್ನು ದಾರದಿಂದ ಅಳೆದರೆ ಅಳತೆಯಲ್ಲಿ ಕೂದಲಿನ ವ್ಯತ್ಯಾಸವೂ ಕಾಣುವುದಿಲ್ಲ ಎಂದು ಜೈಪುರದ ವಾಸ್ತುಶಿಲ್ಪದ ಬಗ್ಗೆ ಹೇಳಲಾಗುತ್ತದೆ. ಕೆಲವರು ಇದನ್ನು ಪ್ಯಾರಿಸ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ.