ಸೌದಿ ಅರೇಬಿಯಾದಲ್ಲಿರುವ 7,000 ವರ್ಷ ಹಳೆಯ ಮರುಭೂಮಿ ಸ್ಮಾರಕವೊಂದರಲ್ಲಿ ಪ್ರಾಣಿಗಳ ಎಲುಬುಗಳ ನಡುವೆ ಹೂತುಹೋಗಿರುವ ಮಾನವನ ಮೂಳೆಗಳನ್ನು ಪ್ರಾಚ್ಯವಸ್ತು ತಜ್ಞರು ಪತ್ತೆ ಮಾಡಿದ್ದಾರೆ.
30ರ ವಯಸ್ಸಿನ ಪುರುಷನೊಬ್ಬನ ಮೂಳೆಗಳು ಇವು ಎಂದು ತಜ್ಞರು ತಿಳಿಸಿದ್ದಾರೆ. ಇತಿಹಾಸಪೂರ್ವ ಜನಾಂಗವು ಈ ಜಾಗದಲ್ಲಿ 7000 ವರ್ಷಗಳಿಗೂ ಹಿಂದೆ ವಿಧಿ ವಿಧಾನಗಳನ್ನು ಕೈಗೊಳ್ಳುತ್ತಿದ್ದ ಸ್ಥಳ ಇದಾಗಿದೆ ಎಂದು ’ಲೈವ್ ಸೈನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ತಿಳಿಸುತ್ತದೆ.
ಮಸ್ತಾತಿಲ್ ಎಂದು ಹೇಳಲಾಗುವ ಇಂಥ ರಚನೆಗಳನ್ನು ಸೌದಿ ಅರೇಬಿಯಾದ ಪ್ರದೇಶವು ಹಿಂದೊಮ್ಮೆ ಸಂಪದ್ಭರಿತ ಹುಲ್ಲುಗಾವಲುಗಳನ್ನು ಹೊಂದಿದ್ದ ಕಾಲದಲ್ಲಿ ಕಟ್ಟಲಾಗಿದೆ. ಆಯತಾಕೃತಿಯಲ್ಲಿರುವ ಈ ರಚನೆಗಳು ಮರುಭೂಮಿಯ ಮರಳಿನಲ್ಲಿ ಹೂತುಹೋಗಿವೆ. ಆ ಕಾಲದಲ್ಲಿ ಇಲ್ಲಿ ಆನೆಗಳು ಹಾಗೂ ಘೇಂಡಾಮೃಗಗಳು ನೀರಿನಲ್ಲಿ ಆಟವಾಡುತ್ತಿದ್ದವು ಎನ್ನಲಾಗಿದೆ.
ಹವಾಮಾನ ಬದಲಾವಣೆಗಳ ಪರಿಣಾಮ ಈ ಸಮೃದ್ಧ ಭೂಮಿಯು ಮುಂದಿನ ದಿನಗಳಲ್ಲಿ ಮರುಭೂಮಿಯಾಗಿ ಬದಲಾಗಿದೆ. ಸಂಶೋಧಕರು ಹೇಳುವ ಹಾಗೆ ಈ ಭೂಮಿಯನ್ನು ರಕ್ಷಿಸಲೆಂದು ಆ ಕಾಲದ ಜನರು ಜಾನುವಾರುಗಳನ್ನು ಇಲ್ಲಿ ಬಲಿ ಕೊಡುತ್ತಿದ್ದರು.
ಇದೂವರೆಗೂ ಕೇವಲ ಹತ್ತು ಮಸ್ತಾತಿಲ್ಗಳನ್ನು ಹೊರತೆಗೆಯಲಾಗಿದ್ದು, ಇವುಗಳ ಸುತ್ತಲೂ ಇರುವ ನಂಬಿಕೆಗಳ ಕುರಿತು ಇದುವರೆಗೂ ಏನನ್ನೂ ಬರೆಯಲಾಗಿಲ್ಲ ಎಂದು ಸಂಶೋಧಕಿ ಮೆಲಿಸ್ಸಾ ಕೆನಡಿ ತಿಳಿಸುತ್ತಾರೆ. ಸೌದಿ ಅರೇಬಿಯಾದ ಎಲ್’ಉಲಾ ಎಂಬ ಊರಿನಿಂದ 55 ಕಿಮೀ ಪೂರ್ವಕ್ಕಿರುವ ಜಾಗವೊಂದರಲ್ಲಿರುವ ಮಸ್ತಾತಿಲ್ಗಳ ಕುರಿತು ಮೆಲಿಸ್ಸಾ ಮಾಡಿರುವ ಸಂಶೋಧನೆಯ ವರದಿಗಳು ಪ್ರಕಟಗೊಂಡಿದ್ದವು.