ಜಾಗತಿಕ ಫುಟ್ಬಾಲ್‌ನ ಸಾರ್ವಕಾಲಿಕ ದಂತಕಥೆಗಳಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿ ಬದುಕಿನ 800ನೇ ಗೋಲ್ ದಾಖಲಿಸಿದ್ದಾರೆ. ಈ ಮೂಲಕ, ಪೋರ್ಚುಗಲ್‌ನ ಕ್ರಿಶ್ಚಿಯಾನೋ ರೊನಾಲ್ಡೋ ಬಳಿಕ ಈ ಸಾಧನೆಗೈದ ಮತ್ತೊಬ್ಬ ಆಟಗಾರರಾಗಿದ್ದಾರೆ ಮೆಸ್ಸಿ. ರೊನಾಲ್ಡೋ ತಮ್ಮ ವೃತ್ತಿ ಬದುಕಿನಲ್ಲಿ 830 ಗೋಲುಗಳನ್ನು ದಾಖಲಿಸಿದ್ದಾರೆ.
ಫಿಫಾ ವಿಶ್ವಕಪ್ 2022ರ ಫೈನಲ್ ಬಳಿಕ ಇದೇ ಮೊದಲ ಬಾರಿಗೆ ಮೈದಾನಕ್ಕಿಳಿದ ಅರ್ಜೆಂಟೀನಾ, ಬ್ಯೂನಸ್ ಐರಿಸ್‌ನಲ್ಲಿ ಪನಾಮಾ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳಿಂದ ಜಯಗಳಿಸಿದೆ.
ಪಂದ್ಯದಲ್ಲಿ ಎರಡೂ ಗೋಲುಗಳನ್ನು ಮೆಸ್ಸಿಯೇ ಗೋಲ್‌ಪೋಸ್ಟ್‌ನತ್ತ ಒದೆಯುವ ಮೂಲಕ ಈ ಅಪರೂಪದ ಸಾಧನೆಗೈದಿದ್ದಾರೆ. ಮುಂದಿನ ಪಂದ್ಯದಲ್ಲಿ ಮೆಸ್ಸಿ ಮತ್ತೊಂದು ಗೋಲು ಗಳಿಸಿದಲ್ಲಿ, ತಮ್ಮ ದೇಶವನ್ನು ಪ್ರತಿನಿಧಿಸುತ್ತಾ ಗಳಿಸಿದ 100ನೇ ಗೋಲು ಅದಾಗಲಿದೆ.
ಕತಾರ್‌ನಲ್ಲಿ ನಡೆದ ಫಿಫಾ 2022ರಲ್ಲಿ ತಮ್ಮ ತಂಡವನ್ನು ಟ್ರೋಫಿ ಗೆಲುವಿನತ್ತ ಮುನ್ನಡೆಸಿದ ಬಳಿಕ ಮೆಸ್ಸಿ ತಮ್ಮ ದೇಶದಲ್ಲಿ ಅತಿ ದೊಡ್ಡ ರಾಷ್ಟ್ರೀಯ ಹೀರೋ ಆಗಿಬಿಟ್ಟಿದ್ದಾರೆ.