ಹಿಂದೂ ದೇವರಾದ ಹನುಮಂತನನ್ನು ಅವಮಾನಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪಾಕಿಸ್ತಾನಿ ಪತ್ರಕರ್ತ ಮತ್ತು ಲೇಖಕನಾದ ಅಸ್ಲಂ ಬಲೋಚ್ ಎಂಬಾತನನ್ನು ಸಿಂಧ್ ಪೊಲೀಸರು ಬಂಧಿಸಿದ್ದಾರೆ. ಅವನ ವಿರುದ್ಧ ಮಿರ್ಪುರ್ಖಾಸ್ ನಗರದ ಸ್ಯಾಟಲೈಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಪತ್ರಕರ್ತ ಕಂಬಿ ಹಿಂದೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲುಹಾನ ಪಂಚಾಯತ್ ಉಪಾಧ್ಯಕ್ಷ ರಮೇಶ್ ಕುಮಾರ್ ಅವರು ಆರೋಪಿತ ಪತ್ರಕರ್ತನ ವಿರುದ್ಧ ದೂರು ದಾಖಲಿಸಿದ್ದರು. ಸ್ಥಳೀಯ ಲೇಖಕ ಅಸ್ಲಂ ಬಲೋಚ್ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ವಿವಾದಿತ ರೀತಿಯಲ್ಲಿ ಹನುಮಾನ್ ಪೋಸ್ಟ್ ಅನ್ನು ಹಂಚಿಕೊಂಡಿದ್ದನ್ನ ಆರೋಪಿಸಿ ದೂರು ನೀಡಿದ್ದರು.
ಅಸ್ಲಂ ಬಲೂಚ್ ತನ್ನ ಕೃತ್ಯದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ದ್ವೇಷ ಮತ್ತು ಕೋಮು ಸೌಹಾರ್ದತೆಯನ್ನು ಹರಡಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಉದ್ದೇಶಪೂರ್ವಕವಾಗಿ ಎರಡು ಧರ್ಮಗಳ ನಡುವೆ ವೈಷಮ್ಯವನ್ನು ಹರಡಲು ಪ್ರಯತ್ನಿಸುವವರಿಗೆ ಶಿಕ್ಷೆಯನ್ನು ಒದಗಿಸುವ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ, ಒಬ್ಬ ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು.
“ಕ್ಯಾಪ್ಟನ್ ಶ್ರೀ ರಾಮ್ ಪಾರ್ಕ್ ವಾಲೆ” ಎಂಬ ಶೀರ್ಷಿಕೆಯೊಂದಿಗೆ ಭಗವಾನ್ ಹನುಮಾನ್ ಫೋಟೋವನ್ನು ಅಸ್ಲಂ ಬಲೋಚ್ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ವಿವಾದಿತ ಪೋಸ್ಟ್ ಬಗ್ಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜ್ಞಾನಚಂದ್ ಇಸ್ರಾನಿ ಅವರು ಮಿರ್ಪುರ್ಖಾಸ್ ಪೊಲೀಸ್ ಉನ್ನತ ಪೊಲೀಸರನ್ನು ಸಂಪರ್ಕಿಸಿ ಅವರನ್ನು ತಕ್ಷಣವೇ ಬಂಧಿಸುವಂತೆ ಆದೇಶಿಸಿದ್ದರು.