ಮಾನವೀಯ ಸ್ಪಂದನೆಗಿಂತಲೂ ಮಿಗಿಲಾದ ಶಕ್ತಿ ಮಾನವ ಜಗತ್ತಿನಲ್ಲಿ ಯಾವುದೂ ಇಲ್ಲ. ಸ್ವಾರ್ಥಮಯ ಪ್ರಪಂಚದಲ್ಲಿ ಎಲ್ಲರೂ ತಂತಮ್ಮ ಜೀವನಗಳನ್ನೇ ಕೇಂದ್ರಿತವಾಗಿಸಿಕೊಂಡು ಓಡುತ್ತಿರುವ ನಡುವೆ ಅಲ್ಲಲ್ಲಿ ಪರರ ನೋವಿಗೆ ಮಿಡಿಯುವ ಜೀವಗಳು ಕಾಣಿಸಿಕೊಂಡು ನಮ್ಮೆಲ್ಲರ ಹುಬ್ಬೇರಿಸಿ, ’ಮಾನವೀಯತೆ ಇನ್ನೂ ಜೀವಂತವಿದೆ’ ಎಂದು ನಿಟ್ಟುಸಿರು ಬಿಡುವಂತೆ ಮಾಡುತ್ತದೆ.
ಇಂಥದ್ದೇ ನಿದರ್ಶನವೊಂದರಲ್ಲಿ ರೈಲ್ವೇ ಉದ್ಯೋಗಿಯೊಬ್ಬರು ರೈಲು ಹಳಿಯ ಮೇಲೆ ಬಿದ್ದಿದ್ದ ಬಾಲಕನ ಜೀವ ಉಳಿಸಿದ್ದಾರೆ. ದೃಷ್ಟಿದೋಷವಿರುವ ತಾಯಿಯೊಂದಿಗೆ ರೈಲ್ವೇ ಪ್ಲಾಟ್‌ಫಾರಂನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಲಕ ಹಳಿಯ ಮೇಲೆ ಬಿದ್ದುಬಿಡುತ್ತಾನೆ.
ರೈಲೊಂದು ಅದೇ ಪ್ಲಾಟ್‌ಫಾರಂಗೆ ಕೆಲವೇ ಸೆಕೆಂಡ್‌ಗಳಲ್ಲಿ ಆಗಮಿಸುತ್ತಿರುವ ಸಂದರ್ಭದಲ್ಲಿ ಹೀಗೆ ಆಗಿದ್ದನ್ನು ಕಂಡ ಸಿಬ್ಬಂದಿಯೊಬ್ಬರು ಬಾಲಕನತ್ತ ದೌಡಾಯಿಸಿ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆತನನ್ನು ಕಾಪಾಡಿ, ಇನ್ನೇನು ರೈಲಿಗೆ ಸಿಕ್ಕೇಬಿಟ್ಟರೇನೋ ಎನ್ನುವ ಭೀತಿಯ ನಡುವೆಯೇ ತಾವೂ ಸಹ ಮಿಂಚಿನ ವೇಗದಲ್ಲಿ ಪ್ಲಾಟ್‌ಫಾರಂ ಏರಿಬಿಡುತ್ತಾರೆ. ವೇಗವಾಗಿ ಸಾಗಿ ಬರುತ್ತಿದ್ದ ರೈಲು, ಕ್ಷಣಾರ್ಧದಲ್ಲಿ ಅವರನ್ನು ಹಾಯ್ದು ಹೋಗುತ್ತದೆ.
ನೋಡಿದರೇ ಮೈ ಜುಮ್ಮೆನ್ನುವ ಈ ಘಟನೆಯ ವಿಡಿಯೋ ರೈಲ್ವೇ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಶೇರ್ ಮಾಡಿದ ಕ್ರಿಕೆಟಿಗೆ ವಿವಿಎಸ್ ಲಕ್ಷ್ಮಣ್, “ದೃಷ್ಟಿ ದೋಷವಿದ್ದ ತಾಯಿಯ ಆರು ವರ್ಷದ ಬಾಲಕನನ್ನು ಕಾಪಾಡಲು ತಮ್ಮ ಜೀವವನ್ನೇ ಪಣಕ್ಕಿಟ್ಟ ಮಯೂರ್ ಶಿಲ್ಕೆಗೆ ನನ್ನ ನಮನ. ತಮ್ಮ ಈ ಸಾಹಸಕ್ಕೆ ರೈಲ್ವೇ ಇಲಾಖೆ ಘೋಷಿಸಿದ ಬಹುಮಾನದ ಮೊತ್ತದ ಅರ್ಧದಷ್ಟನ್ನು ಮಯೂರ್ ಮಗುವಿನ ಶಿಕ್ಷಣಕ್ಕೆ ನೀಡಿದ್ದಾರೆ. ಮಯೂರ್‌ರ ಮೌಲ್ಯಗಳ ಬಗ್ಗೆ ಹೆಮ್ಮೆಯೆನಿಸುತ್ತದೆ,” ಎಂದಿದ್ದಾರೆ.