ಕೋಲ್ಕತ್ತಾ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ನೆನಪಿಸುವ ಘಟನೆಯೊಂದು ಕೋಲ್ಕತ್ತಾದ ಹೊರವಲಯದಲ್ಲಿ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಶವವನ್ನು ಮೂರು ತುಂಡುಗಳಾಗಿ.ಕತ್ತರಿಸಿ ಜಲಪಾತದ ಬಳಿ ಹೂತುಹಾಕಿದ ಘಟನೆ ನಡೆದಿದ್ದು, ಕೋಲ್ಕತ್ತಾದ ದಕ್ಷಿಣ ಹೊರವಲಯದಲ್ಲಿರುವ ಬಿಷ್ಣುಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಾರದಾ ಗಾರ್ಡನ್ ಪ್ರದೇಶದಿಂದ ಮೃತದೇಹದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಅಲಿಮ್ ಶೇಖ್ ನನ್ನು ಆತನ ಪತ್ನಿ ಮುಮ್ತಾಜ್ ಶೇಖ್ ಹತ್ಯೆಗೆ ಸಂಬಂಧಿಸಿದಂತೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮಂಗಳವಾರ ರಾತ್ರಿ ಶೇಖ್ ತನ್ನ ಮೋಟಾರ್ ಸೈಕಲ್‌ನಲ್ಲಿ ಮುಮ್ತಾಜ್ ಳನ್ನು ಆಕೆ ಕೆಲಸ ಮಾಡುವ ಸ್ಥಳದಿಂದ ಕರೆದುಕೊಂಡು ಹೋಗಿದ್ದಾನೆ. ಅವನು ಒಬ್ಬಂಟಿಯಾಗಿ ಹಿಂದಿರುಗಿದ್ದು, ಕುಟುಂಬ ಸದಸ್ಯರು ಪ್ರಶ್ನಿಸಿದ್ದಾರೆ. ಅವಳು ಶಾಪಿಂಗ್ ಗಾಗಿ ಸ್ಥಳೀಯ ಮಾರುಕಟ್ಟೆಯ ಬಳಿ ಇಳಿದಿದ್ದಾಳೆ ಎಂದು ಹೇಳಿದ್ದಾನೆ.
ತಡವಾಗಿಯಾದರೂ ಆಕೆ ಹಿಂತಿರುಗದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಸತ್ಯ ಹೇಳುವಂತೆ ಒತ್ತಡ ಹೇರಲು ಆರಂಭಿಸಿದ್ದರು. ಆದರೆ, ಆತ ಮೌನ ವಹಿಸಿದ್ದರಿಂದ ಆತನ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರ ಒತ್ತಡಕ್ಕೆ ಮಣಿದ ಶೇಖ್ ಬುಧವಾರ ಬೆಳಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಜೊತೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲಿಮ್ ಪತ್ನಿಯ ದೇಹದ ಭಾಗಗಳನ್ನು ಹೂತಿಟ್ಟ ಸ್ಥಳವನ್ನು ತೋರಿಸಿದ. ಮೊದಲು ಆಕೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ನೀರಿನ ಪಕ್ಕದ ಮಣ್ಣಿನಡಿಯಲ್ಲಿ ಹೂತು ಹಾಕಿದ್ದಾನೆರು.
ಇಂತಹ ಘೋರ ಹೆಜ್ಜೆಯ ಹಿಂದಿನ ಕಾರಣವನ್ನು ಆರೋಪಿ ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಸ್ಥಳೀಯ ಪೊಲೀಸರು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ವಿವಾಹೇತರ ಸಂಬಂಧದ ಸಮಸ್ಯೆಯು ಈ ಭೀಕರ ಘಟನೆಯ ಹಿಂದೆ ಇದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.