ಸಾಹಸ ಕ್ರೀಡೆಯಾಗಿ ಅಮೆರಿಕದಲ್ಲಿ ಜನನ ತಾಳಿದ ಸ್ಕೇಟ್‌ಬೋರ್ಡಿಂಗ್ ಇಂದು ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ ಜನಪ್ರಿಯ ಚಟಿವಟಿಕೆಯಾಗಿದೆ.
ಸ್ಕೇಟ್‌ಬೋರ್ಡಿಂಗ್‌ನಲ್ಲಿ ಬರೀ ಸಾಹಸ ಮಾತ್ರವಲ್ಲದೇ ಕಲೆಯೂ ಬೆರೆತಿದ್ದು, ಸಾಹಸೀ ಪ್ರವೃತ್ತಿ ಯುವಕರಿಗೆ ಭಾರೀ ಅಚ್ಚುಮೆಚ್ಚಿನ ಆಟವಾಗಿದೆ. ತಮ್ಮ ಸ್ಕೇಟ್‌ಬೋರ್ಡ್‌ಗಳ ಮೇಲೆ ಭಾರೀ ರಿಸ್ಕೀ ಟ್ರಿಕ್‌ಗಳನ್ನು ಮಾಡುವ ಮೂಲಕ ಸ್ಕೇಟ್‌ಬೋರ್ಡರ್‌ಗಳು ಪ್ರತಿನಿತ್ಯ ಹೊಸ ಮೈಲುಗಲ್ಲುಗಳನ್ನು ನೆಡುತ್ತಾ ಸಾಗಿದ್ದಾರೆ.
29 ವರ್ಷದ ಲೆಟಿಸಿಯಾ ಬ್ಯೂಫೋನಿ ಇದೇ ಕ್ರೀಡೆಯಲ್ಲಿ ಚಾಂಪಿಯನ್ ಆಗಿದ್ದಾರೆ. ಬ್ರೆಜ಼ಿಲ್‌ನ ಸಾವೋ ಪೌಲೋದ ಇವರು ಸದ್ಯ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ.
ಸಿ-130 ಹರ್ಕ್ಯೂಲಸ್ ವಿಮಾನದಿಂದ ಆಗಸದಲ್ಲಿ 9,022 ಅಡಿ ಎತ್ತರದಿಂದ ಸ್ಕೇಟ್‌ಬೋರ್ಡ್‌ನೊಂದಿಗೆ ಜಿಗಿಯುವ ಮೂಲಕ ನೂತನ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ ಲೆಟಿಸಿಯಾ. ಹಾರುತ್ತಿರುವ ವಿಮಾನವೊಂದರಿಂದ ಅತ್ಯಂತ ಎತ್ತರದಲ್ಲಿ ಜಿಗಿದು ಹೀಗೆ ಸ್ಕೇಟ್‌ಬೋರ್ಡಿಂಗ್ ಮಾಡಿದ ದಾಖಲೆ ಈಕೆಯದ್ದಾಗಿದೆ.
ಫಾಸ್ಟ್ & ಫ್ಯೂರಿಯಸ್ ಫ್ರಾಂಚೈಸಿ ಚಲನಚಿತ್ರಗಳಲ್ಲಿ ಬಳಸಲಾದ ಸಿ-130 ಹರ್ಕ್ಯೂಲಸ್ ವಿಮಾನವನ್ನೇರಿದ ಲೆಟಿಸಿಯಾ, ವಿಮಾನದೊಳಗಿಂದ ಸ್ಕೇಟ್‌ಬೋರ್ಡಿಂಗ್ ಮಾಡುತ್ತಾ 9.1 ಕೆಜಿಯಷ್ಟು ತೂಕವಿದ್ದ ಪ್ಯಾರಾಚೂಟ್‌ನಲ್ಲಿ ಹೀಗೆ ಹಾರಿದ್ದಾರೆ.
ಲೆಟಿಸಿಯಾ ಎಕ್ಸ್ ಗೇಮ್ಸ್‌ನಲ್ಲಿ ಐದು ಬಾರಿ ಸ್ಕೇಟ್‌ಬೋರ್ಡ್ ಸ್ಟ್ರೀಟ್ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಹಿಳೆಯಾಗಿದ್ದಾರೆ. ಅಲ್ಲದೇ ಎಕ್ಸ್ ಗೇಮ್ಸ್ ಬೇಸಿಗ ಅವತರಣಿಕೆಯಲ್ಲೂ ಸಹ 12 ಪದಕಗಳನ್ನು ಗೆದ್ದಿದ್ದಾರೆ.
“ಗಾಳಿಯಲ್ಲಿ ಅಷ್ಟು ಎತ್ತರದಲ್ಲಿ ಹೀಗೆ ಮಾಡಿದ ಮೊದಲ ವ್ಯಕ್ತಿ ಎಂದು ತಿಳಿದಾಗ ಕ್ರೇಜ಼ಿ ಎನಿಸುತ್ತದೆ. ಇದು ಸಾಧ್ಯವೋ ಅಲ್ಲವೋ ಎಂಬುದೇ ನನಗೆ ಗೊತ್ತಿರಲಿಲ್ಲ. ವಿಮಾನದಲ್ಲಿ ನಾನು ಹಿಂದೆ ಎಂದೂ ಸ್ಕೇಟ್‌ಬೋರ್ಡಿಂಗ್ ಮಾಡಿಲ್ಲ,” ಎಂದು ತಮ್ಮ ಸಾಧನೆಯ ಕುರಿತು ಲೇಟಿಸಿಯಾ ಹೇಳಿದ್ದಾರೆ.