
ಗುಜರಾತಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕಳ್ಳರೆಂದು ಶಂಕಿಸಿ ಕೊಲ್ಲಲಾಗಿದೆ.
ಕುಲ್ಮಾನ್ ಗಗನ್ ಎಂದು ಗುರುತಿಸಲಾದ 35 ವರ್ಷದ ನೇಪಾಳದ ಪ್ರಜೆಯನ್ನು ಭಾನುವಾರ ಅಹಮದಾಬಾದ್ ಜಿಲ್ಲೆಯ ಚಂಗೋದರ್ ಪ್ರದೇಶದಲ್ಲಿ ಗುಂಪೊಂದು ಹತ್ಯೆ ಮಾಡಿದೆ. ಈ ಪ್ರದೇಶದಲ್ಲಿ ಬೀದಿನಾಯಿಗಳು ಬೆನ್ನಟ್ಟಲು ಆರಂಭಿಸಿದ ನಂತರ ಸ್ಥಳೀಯರು ಕಳ್ಳನೆಂದು ಭಾವಿಸಿದ್ದಾರೆ. ಜನಸಮೂಹವು ಅವನನ್ನು ಹಿಡಿದ ನಂತರ, ಗಗನ್ ತನ್ನ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದ. ಆದರೆ ಸ್ಥಳೀಯ ಭಾಷೆ ಮಾತನಾಡದ ಕಾರಣ ಸರಿಯಾಗಿ ಸಂವಹನ ಮಾಡಲು ಸಾಧ್ಯವಾಗಲಿಲ್ಲ. ಪೊಲೀಸರು ಗಗನ್ ಶವವನ್ನು ಕಾಲುವೆಯಲ್ಲಿ ಪತ್ತೆ ಹಚ್ಚಿದ್ದು, 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಛತ್ತೀಸ್‌ಗಢದ ವಲಸೆ ಕಾರ್ಮಿಕನನ್ನು ಸೋಮವಾರ ಗುಜರಾತ್‌ನ ಖೇಡಾ ಜಿಲ್ಲೆಯ ಮಹಮದಾಬಾದ್ ತಾಲೂಕಿನ ಸುಧಾವನ್‌ಸೋಲ್ ಗ್ರಾಮದ ಜನಸಮೂಹವು ಹೊಡೆದು ಕೊಂದಿದೆ. ಸಂತ್ರಸ್ತ ರಮೇಶ್ ಕುಮಾರ್ ಖೇರಾವರ್ ಅವರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು.
ಸೋಮವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಾಗಿದೆ. ಸಬರಮತಿಯ ಹೈಸ್ಪೀಡ್ ರೈಲ್ವೇ ಟರ್ಮಿನಲ್‌ನಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿಹಾರ ಮೂಲದ ಮನೀಶ್ ಕುಮಾರ್ ಸಿಂಗ್ ಎಂಬವರು ಮೃತದೇಹವನ್ನು ಗುರುತಿಸಲು ಪೊಲೀಸ್ ಠಾಣೆಯಿಂದ ಕರೆ ಸ್ವೀಕರಿಸಿದ್ದಾರೆ. ಅವರು ಸುಮಾರು ಮೂರು ದಿನಗಳ ಹಿಂದೆ ಕೆಲಸಕ್ಕಾಗಿ ನನ್ನ ಬಳಿಗೆ ಬಂದಿದ್ದರು, ಆದರೆ ನಂತರ ಅವರು ಇಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ತಮ್ಮ ಊರಿಗೆ ಮರಳಲು ಬಯಸಿದ್ದರು ಎಂದು ಸಿಂಗ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಗ್ರಾಮಸ್ಥರು ಮೃತನನ್ನು ಕಳ್ಳನೆಂದು ಶಂಕಿಸಿ ಥಳಿಸಿದ್ದಾರೆ ಎಂದು ಮಹಮದಾಬಾದ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಎನ್. ಪಾಂಚಾಲ್ ತಿಳಿಸಿದರು.