ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಇನ್ನೂ ಕ್ಷೇತ್ರದ ಗುಟ್ಟು ಬಿಟ್ಟು ಕೊಟ್ಟಿಲ್ಲ. ನಾಳೆ ಒಂದೇ ಹೆಸರು ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಅದರಲ್ಲಿ ನನ್ನ ಹೆಸರು ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರದಿಂದ ಪುತ್ರ ಡಾ. ಯತೀಂದ್ರ ಹೆಸರು ಕ್ಲಿಯರ್ ಆಗಿದೆ. ನನ್ನ ಸ್ಪರ್ಧೆ ವಿಚಾರವಾಗಿ ಮನೆಯವರ ಅಭಿಪ್ರಾಯವನ್ನೂ ಕೇಳುತ್ತಿದ್ದೇನೆ. ಅಂತಿಮವಾಗಿ ವರಿಷ್ಠರ ನಿರ್ಧಾರವೇ ನನ್ನ ನಿರ್ಧಾರ. ಯಾವುದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಿದರೂ ಗೆಲ್ಲುವ ವಿಶ್ವಾಸ ಇದೆ. ನಾನು ಕ್ಷೇತ್ರ ಹುಡುಕುತ್ತಿದ್ದೇನೆ ಎಂಬುದೆಲ್ಲವೂ ತಪ್ಪು ಗ್ರಹಿಕೆ ಎಂದು ಹೇಳಿದ್ದಾರೆ.
ಬಾದಾಮಿ, ಕೋಲಾರ, ವರುಣಾ ಕ್ಷೇತ್ರಗಳು ನನ್ನ ಆಯ್ಕೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮತ್ತೆ ವರುಣಾ ಕ್ಷೇತ್ರಕ್ಕೆ ಯತೀಂದ್ರ ಬರುವುದನ್ನು ತಳ್ಳಿ ಹಾಕುವಂತಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕೋಲಾರ ಜನರಿಗೂ ವರಿಷ್ಠರ ಜೊತೆ ಚರ್ಚಿಸಿ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ಅರ್ಜಿಯಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ಬರೆದಿರುವೆ. ನಾನು ಎಲ್ಲಿ ಸ್ಪರ್ಧಿಸಬೇಕೆಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್ ತೀರ್ಮಾನ ಮಾಡಿದರೆ ನಾಳೆ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದ್ದಾರೆ.