ಬೀಜಿಂಗ್: ‘ಮೋದಿ ಲಾವೋಕ್ಸಿಯಾನ್’ ಅಂದರೆ ‘ಅಮರ ಮೋದಿ’ ಎಂದು ಚೀನಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.
ಭಾರತ -ಚೀನಾ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಸಂಬಂಧ ಹಳಸಿದ್ದು, ಇಂತಹ ಸಂದರ್ಭದಲ್ಲಿ ಚೀನಾದ ನೆಟ್ಟಿಗರು ಪ್ರಧಾನಿ ಅವರನ್ನು ಹಾಡಿ ಹೊಗಳಿರುವುದು ವಿಶ್ವದ ಹುಬ್ಬೇರುವಂತೆ ಮಾಡಿದೆ. ಅಮೆರಿಕದ ರಕ್ಷಣಾ ನಿಯತಕಾಲಿಕೆ ‘ದಿ ಡಿಪ್ಲೋಮ್ಯಾಟ್’ನಲ್ಲಿ ಚೀನಾದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತದೆ ಎನ್ನುವ ಶೀರ್ಷಿಕೆಯಡಿ ಪತ್ರಕರ್ತ ಮು ಚುನ್ ಶನ್ ಅವರು ಲೇಖನ ಬರೆದಿದ್ದಾರೆ.
ಚೀನಾದಲ್ಲಿ ಸಿನಾ ವೈಬೋ ಎಂಬ ಸಾಮಾಜಿಕ ಮಾಧ್ಯಮ ಇದ್ದು, 58 ಕೋಟಿ ಬಳಕೆದಾರರನ್ನು ಹೊಂದಿದೆ. ಟ್ವಿಟರ್ ಮಾದರಿಯ ಸಿನಾ ವೈಬೋದಲ್ಲಿ 2020 ರವರೆಗೆ ಮೋದಿ ಕೂಡ ಖಾತೆ ಹೊಂದಿದ್ದವರು. ಸಿನಾ ವೈಬೋ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ಪ್ರಮುಖ ದೇಶಗಳ ನಡುವೆ ಸಮತೋಲನ ಕಾಪಾಡಿಕೊಳ್ಳುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಾವೋಕ್ಸಿಯಾನ್ ಎಂಬುದು ವಿಲಕ್ಷಣ ಸಾಮರ್ಥ್ಯ ಹೊಂದಿ ಅಮರರಾಗುವ ಹಿರಿಯರನ್ನು ಉಲ್ಲೇಖಿಸುವ ಪದ ಆಗಿದೆ. ಬೇರೆ ನಾಯಕರಿಗಿಂತ ಪ್ರಧಾನಿ ಮೋದಿ ಭಿನ್ನವಾಗಿದ್ದಾರೆ ಎಂದು ವರ್ಣಿಸಲಾಗಿದೆ. ಮೋದಿಯವರ ಉಡುಗೆ ಮತ್ತು ದೈಹಿಕ ನೋಟದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದ್ದು, ಭಾರತದ ಹಿಂದಿನ ನೀತಿಗಳಿಗಿಂತ ಮೋದಿಯವರ ನೀತಿಗಳು ಭಿನ್ನವಾಗಿವೆ ಎಂದು ಚೀನಾದ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಮು ಚುನ್ ಶನ್ ಅವರು, ನಾನು ಸುಮಾರು 20 ವರ್ಷಗಳಿಂದ ಅಂತರರಾಷ್ಟ್ರೀಯ ಮಾಧ್ಯಮ ವರದಿ ಮಾಡುತ್ತಿದ್ದು, ಚೀನಾ ನೆಟ್ಟಿದರು ವಿದೇಶಿ ನಾಯಕನಿಗೆ ಅಡ್ಡ ಹೆಸರು ಇಡುವುದು ಅಪರೂಪ. ಮೋದಿಯವರಿಗೆ ಲಾವೋಕ್ಸಿಯಾನ್ ಎಂದು ಕರೆದಿರುವುದು ಎದ್ದು ಕಾಣುತ್ತಿದೆ. ಅವರು ಚೀನಾ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.