ಆಳ ಸಮುದ್ರದಲ್ಲಿ ಡೈವ್ ಮಾಡುವ ಆಸೆ ಬಹಳ ಮಂದಿಗೆ ಇದ್ದರೂ ಸಹ ಇದಕ್ಕೆ ಬೇಕಾದ ಧೈರ್ಯ ಕೆಲವರಿಗೆ ಮಾತ್ರವೇ ಇರುತ್ತದೆ. ಇನ್ನೂ ಕೆಲವರಿಗೆ ಜಲಚರಗಳ ಹಾಗೆ ನೀರಿನಾಳದಲ್ಲಿ ಕೆಲ ದಿನ ಕಳೆಯುವ ಆಸೆ ಇರುತ್ತದೆ.
ಜೋಸೆಫ್ ಡಿಟುರಿ ಹೆಸರಿನ ಈ ಪ್ರಾಧ್ಯಾಪಕನಿಗೆ ನೀರಿನಾಳದಲ್ಲಿ ಸತತ 100 ದಿನಗಳನ್ನು ಕಳೆದು ವಿಶ್ವದಾಖಲೆ ನಿರ್ಮಿಸುವ ಆಸೆ. ದಕ್ಷಿಣ ಫ್ಲಾರಿಡಾ ವಿವಿಯಲ್ಲಿ ಪ್ರೊಫೆಸರ್ ಆಗಿರುವ ಇವರು ಡಾ ಡೀಪ್ ಸೀ ಹೆಸರಿನ ಹ್ಯಾಂಡಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದಾರೆ.
ಮಾರ್ಚ್ 1ರಂದು ತಮ್ಮ ’ನೆಪ್ಚೂನ್ 100’ ಹೆಸರಿನ ಈ ನೀರಿನಾಳದ ವಾಸದ ಪ್ರಯೋಗ ಆರಂಭಿಸಿದ್ದಾರೆ ಜೋಸೆಫ್. ಈ ತಿಂಗಳ ಆರಂಭದಿಂದ ಜೋಸೆಫ್ ನೀರಿನಲ್ಲಿ 30 ಅಡಿಯಷ್ಟು ಆಳದಲ್ಲಿ ವಾಸಿಸುತ್ತಿದ್ದಾರೆ. ನೀರಿನಾಳದಲ್ಲಿ 100 ಚದರಡಿಯಷ್ಟು ವಿಶೇಷವಾದ ವ್ಯವಸ್ಥೆ ಮಾಡಿಕೊಂಡು ಬದುಕುತ್ತಿರುವ ಜೋಸೆಫ್ ಅಮೆರಿಕ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಪ್ರಾಧ್ಯಾಪಕರಾಗಿದ್ದಾರೆ.
ಅತೀವ ಒತ್ತಡದಲ್ಲಿ ಮಾನವನ ದೇಹ ಹೇಗೆ ಸ್ಪಂದಿಸುತ್ತದೆ ಎಂದು ಅರಿಯಲು ತಮ್ಮ ನೆಪ್ಚೂನ್ 100 ಯೋಜನೆ ನೆರವಾಗಲಿದೆ ಎನ್ನುತ್ತಾರೆ ಜೋಸೆಫ್. ಇದೇ ವೇಳೆ, ನೀರಿನಾಳದಿಂದಲೇ ತಮ್ಮ ಬಯೋಮೆಡಿಕಲ್ ಇಂಜಿನಿಯರಿಂಗ್ ಕ್ಲಾಸ್‌ಗಳನ್ನು ತೆಗೆದುಕೊಳ್ಳಲು ಮುಂದುವರೆಸಿದ್ದಾರೆ ಜೋಸೆಫ್.
https://www.youtube.com/watch?v=PcGdFtCMxDI