ಈ ಲಕ್ಸೂರಿ ಫ್ಯಾಶನ್ ಬ್ರಾಂಡ್ಗಳು ಸದಾ ಒಂದಿಲ್ಲೊಂದು ರೀತಿಯಲ್ಲಿ ಭಿನ್ನವಾದ ಐಡಿಯಾಗಳೊಂದಿಗೆ ಬರುತ್ತವೆ. ಅವುಗಳಲ್ಲಿ ಕೆಲವು ಸೂಪರ್ ಹಿಟ್ ಆದರೆ ಮಿಕ್ಕವು ಅವರಿಗೇ ತಿರುಗೇಟು ನೀಡುತ್ತವೆ.
ಆದರೆ ಐಡಿಯಾಗಳೇನಾದರೂ ಹಿಟ್ ಆದಲ್ಲಿ ಫ್ಯಾಶನ್ ಬ್ರಾಂಡ್ಗಳಡಿ ಮಾರುವ ಉತ್ಪನ್ನಗಳು ಭಾರೀ ಮೌಲ್ಯಕ್ಕೆ ಬಿಕರಿಯಾಗುತ್ತವೆ.
ಡೋಲ್ಸ್ & ಗ್ಯಾಬಾದ ’ಖಾಕಿ ಸ್ಕೀ ಮಾಸ್ಕ್ ಕ್ಯಾಪ್’ 32,000 ರೂ.ಗಳಿಗೆ ಮಾರಾಟವಾಗಿರುವುದೇ ಇರಬಹುದು, ಹ್ಯೂಗೋ ಬಾಸ್ನ ಫ್ಲಿಫ್-ಫ್ಲಾಪ್ಗಳು 9,000 ರೂ.ಗಳಿಗೆ ಬಿಕರಿಯಾಗಿದ್ದೇ ಇರಬಹುದು, ಫ್ಯಾಶನ್ ಬ್ರಾಂಡ್ಗಳು ಟ್ರೆಂಡ್ ಆದರೆ ಸಾಕು ಅವುಗಳ ಉತ್ಪನ್ನಗಳಿಗೆ ಬಂಗಾರದ ಬೆಲೆ ಬಂದುಬಿಡುತ್ತದೆ.
ಇದಕ್ಕಿಂತ ಒಂದು ಕೈ ಹೆಚ್ಚೇ ಎನಿಸುವ ಬೆಳವಣಿಗೆಯೊಂದರಲ್ಲಿ 2014ಕ್ಕೆ ಸೇರಿದ ಸೆಕೆಂಡ್-ಹ್ಯಾಂಡ್ XXL ಶಾಪಿಂಗ್ ಬ್ಯಾಗೊಂದು $104,663ಗೆ (86.1 ಲಕ್ಷ ರೂ) ಮಾರಾಟವಾಗಲು ಸಜ್ಜಾಗಿದೆ ಎಂದು ಫಾರ್ಟೆಕ್ ವರದಿ ಮಾಡಿದೆ.
ಚಾನೆಲ್ ಲಕ್ಸೂರಿ ಬ್ರಾಂಡ್ನ ಆಟಮ್/ವಿಂಟಕ್ ಸಂಗ್ರಹದ ಭಾಗವಾಗಿರುವ ಈ ಬ್ಯಾಗಿನ ಬೆಲೆ ಆಮದು ಸುಂಕವನ್ನೂ ಒಳಗೊಂಡಿದೆಯಂತೆ. ಇದಕ್ಕೆಂದೇ ತನ್ನದೇ ಆದ ಸೂಪರ್ಮಾರ್ಕೆಟ್ ಒಂದನ್ನು ಸಿದ್ಧಪಡಿಸಿರುವ ಚಾನೆಲ್, ತನ್ನ ಬ್ರಾಂಡ್ನ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದೆ. ಮೇಸನ್ರ ಸಿಗ್ನೇಚರ್ ಲೆದರ್ ಹಾಗೂ ಸರಪಳಿ ರೀತಿಯ ರಚನೆಗಳಿಂದ ಈ ಬ್ಯಾಗ್ ವಿಶೇಷವಾಗಿದ ಎಂದು ಚಾನೆಲ್ ಹೇಳಿಕೊಳ್ಳುತ್ತಿದೆ.
ನೋಡಲು ಮಾಮೂಲು ಬುಟ್ಟಿಯಂತೆಯೇ ಕಾಣುವ ಈ ಬ್ಯಾಗಿನ 35 ಪ್ರತಿಶತ ಚರ್ಮದಿಂದ ಮಾಡಲ್ಪಟ್ಟಿದ್ದು, 65 ಪ್ರತಿಶತ ಬೆಳ್ಳಿಯ ಲೇಪದಿಂದ ಕೂಡಿದೆ. ಆದ್ರೆ ಬ್ರಾಂಡಿಂಗ್ ಐಡಿಯಾ ಕ್ಲಿಕ್ ಆಗಿರುವ ಕಾರಣ ಈ ಬ್ಯಾಗಿಗೆ ಈ ರೀತಿಯ ಬೆಲೆ ಸಿಕ್ಕಿದೆ. ಅದೂ ಅಲ್ಲದೇ ತನ್ನ ಬ್ಯಾಗು ಪರಿಸರ ಸ್ನೇಹಿಯಾಗಿದ್ದು, ನೀವು ಇದನ್ನು ಖರೀದಿ ಮಾಡುವ ಮೂಲಕ ಪರಿಸರದ ಮೇಲೆ ಹೊಣೆಗಾರಿಕೆ ತೋರಿದಂತೆಯೂ ಆಗುತ್ತದೆ ಎಂದು ಚಾನೆಲ್ ತನ್ನ ಜಾಹೀರಾತಿನಲ್ಲಿ ಹೇಳಿಕೊಂಡಿದೆ.
ಬ್ಯಾಗಿನ ಈ ಬೆಲೆಯನ್ನು ಕಂಡ ನೆಟ್ಟಿಗರು ಶಾಕ್ ಆಗಿದ್ದು, ಭಾರೀ ವಿನೋದಮಯ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.