ನವದೆಹಲಿ: ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವ ಹೊತ್ತಲ್ಲೇ ಜವಳಿ ಪಾರ್ಕ್ ಘೋಷಣೆ ಮಾಡಲಾಗಿದೆ. ಪ್ರಧಾನ ಮಂತ್ರಿಗಳ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ ರೀಜನಲ್ ಅಂಡ್ ಅಪೆರಲ್ -ಪಿಎಂ ಮಿತ್ರ ಯೋಜನೆಯಡಿ 4445 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಕ್ಸ್ಟೈಲ್ ಪಾರ್ಕ್ ಗಳನ್ನು ನಿರ್ಮಿಸಲಾಗುವುದು.
ರಾಜ್ಯದ ಕಲಬುರ್ಗಿಯಲ್ಲಿ ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ ಆರಂಭವಾಗಲಿದ್ದು ಒಂದು ಲಕ್ಷ ಜನರಿಗೆ ನೇರ ಉದ್ಯೋಗಾವಕಾಶ ಸಿಗಲಿದೆ. ಕಲ್ಯಾಣ ಕರ್ನಾಟಕ ಭಾಗದ ಹೆಚ್ಚಿನ ಜನ ಉದ್ಯೋಗಕ್ಕಾಗಿ ವಲಸೆ ಹೋಗುತ್ತಾರೆ. ಅವರಿಗೆ ಜವಳಿ ಪಾರ್ಕ್ ನಿಂದ ಉದ್ಯೋಗಾವಕಾಶ ಸಿಗಲಿದ್ದು, ಗುಳೆ ಹೋಗುವುದು ತಪ್ಪಲಿದೆ. 1 ಲಕ್ಷ ನೇರ ಉದ್ಯೋಗ ಮತ್ತು 2 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದ್ದು, ಆರ್ಥಿಕತೆಗೂ ಅನುಕೂಲವಾಗುತ್ತದೆ. ಜನರ ಜೀವನಮಟ್ಟ ಕೂಡ ಸುಧಾರಣೆಯಾಗುತ್ತದೆ. ಅಲ್ಲದೆ, ಹತ್ತಿ ಬೆಳೆಗಾರರು, ರಿಯಲ್ ಎಸ್ಟೇಟ್, ಜವಳಿ ಉದ್ಯಮ, ಹೋಟೆಲ್ ವ್ಯಾಪಾರಕ್ಕೆ ಅನುಕೂಲವಾಗಲಿದೆ.
PM MITRA ಮೆಗಾ ಟೆಕ್ಸ್ ಟೈಲ್ ಪಾರ್ಕ್‌ಗಳು 5F(ಫಾರ್ಮ್‌ನಿಂದ ಫೈಬರ್‌ನಿಂದ ಫ್ಯಾಕ್ಟರಿಯಿಂದ ಫ್ಯಾಶನ್‌ನಿಂದ ವಿದೇಶಿ) ದೃಷ್ಟಿಗೆ ಅನುಗುಣವಾಗಿ ಜವಳಿ ವಲಯವನ್ನು ಉತ್ತೇಜಿಸುತ್ತದೆ. ತಮಿಳುನಾಡು, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಎಂಪಿ ಮತ್ತು ಯುಪಿಯಲ್ಲಿ PM MITRA ಮೆಗಾ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.
PM MITRA ಮೆಗಾ ಜವಳಿ ಪಾರ್ಕ್‌ಗಳು ಜವಳಿ ಕ್ಷೇತ್ರಕ್ಕೆ ಅತ್ಯಾಧುನಿಕ ಮೂಲಸೌಕರ್ಯವನ್ನು ಒದಗಿಸುತ್ತವೆ, ಕೋಟಿಗಳ ಹೂಡಿಕೆಯನ್ನು ಆಕರ್ಷಿಸುತ್ತವೆ ಮತ್ತು ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ಗೆ ಉತ್ತಮ ಉದಾಹರಣೆಯಾಗಲಿದೆ ಎಂದು ಹೇಳಿದ್ದಾರೆ.