ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ. ವೈಷ್ಣವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಮೇಲುಕೋಟೆ ಮೈಸೂರಿನಿಂದ ಸುಮಾರು 52 ಕಿಲೋ ಮೀಟರ್ ದೂರದಲ್ಲಿದೆ.
ವೈಷ್ಣವ ಪಂಥದ ಶ್ರೀ ರಾಮಾನುಜಚಾರ್ಯರು 12 ನೇ ಶತಮಾನದಲ್ಲಿ ಮೇಲುಕೋಟೆಯಲ್ಲಿ ನೆಲೆಸಿದ್ದು, ವೈಷ್ಣವ ಪಂಥವನ್ನು ಪ್ರಚುರ ಪಡಿಸಿದ್ದರು. ಚೆಲುವನಾರಾಯಣ ಸ್ವಾಮಿ ಇಲ್ಲಿನ ಆರಾಧ್ಯ ದೈವವಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಾರೆ. ಸಮುದ್ರ ಮಟ್ಟದಿಂದ ಸುಮಾರು 3600 ಅಡಿ ಎತ್ತರದಲ್ಲಿರುವ ಇದು ಪ್ರಕೃತಿದತ್ತವಾದ ಸುಂದರ ತಾಣವಾಗಿದೆ. ಮಾತ್ರವಲ್ಲ, ಮೇಲುಕೋಟೆ ಐತಿಹಾಸಿಕ, ಪೌರಾಣಿಕವಾಗಿಯೂ ಪ್ರಸಿದ್ಧ ಸ್ಥಳ.
ದೇವಾಲಯಗಳ ನಿರ್ಮಾಣ, ಕಲಾಪ್ರೌಢಿಮೆ, ಕಲ್ಯಾಣಿಗಳ ಸುಂದರ ವಿನ್ಯಾಸ, ರಾಯಗೋಪುರ ಕಲಾತ್ಮಕ ನಿರ್ಮಾಣ ಪ್ರವಾಸಿಗರನ್ನು ಸೆಳೆಯುತ್ತವೆ.
ಮೇಲುಕೋಟೆಯಲ್ಲಿ ನಡೆಯುವ ರಾಜಮುಡಿ, ವೈರಮುಡಿ ಮೊದಲಾದ ಉತ್ಸವಗಳಿಗೆ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಶ್ರೀರಂಗಪಟ್ಟಣದಿಂದ ಬಸ್ ವ್ಯವಸ್ಥೆ ಇದೆ. ಪ್ರವಾಸಿಗರೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇಲ್ಲಿ ಸಿನಿಮಾಗಳ ಚಿತ್ರೀಕರಣವೂ ನಡೆಯುತ್ತದೆ.