ಕೊರೊನಾ ಮಹಾಮಾರಿಯ ಅಬ್ಬರ ಕೊಂಚ ತಣ್ಣಗಾಯ್ತು ಎನ್ನುವಷ್ಟರಲ್ಲಿ ದೇಶದಲ್ಲಿ H3N2 ವೈರಸ್ ದಾಳಿ ಇಟ್ಟಿದೆ. ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಇನ್‌ಫ್ಲೂಯೆಂಜಾದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೆಹಲಿಯಲ್ಲಂತೂ ವೈರಸ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಜಾಸ್ತಿಯಿದೆ. ಆಘಾತಕಾರಿ ವಿಷಯವೆಂದರೆ ಮಹಾರಾಷ್ಟ್ರದಲ್ಲಿ ಈ ವೈರಸ್‌ನಿಂದ ಇದುವರೆಗೆ ಮೂವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಇದುವರೆಗೆ 52ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಇನ್‌ಫ್ಲೂಯೆಂಜಾ ಹಾವಳಿ ಹೆಚ್ಚುತ್ತಿರುವುದರಿಂದ ಕೊರೊನಾವನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮಾಸ್ಕ್ ಧರಿಸುವುದರ ಜೊತೆಗೆ ಇತರ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ನವದೆಹಲಿಯ ಆಸ್ಪತ್ರೆಗಳಲ್ಲಿ H3N2 ವೈರಸ್ ಪ್ರಕರಣಗಳಲ್ಲಿ ಸುಮಾರು 150 ಪ್ರತಿಶತದಷ್ಟು ಹೆಚ್ಚಳವಾಗಿದೆ. ಈ ಅಬ್ಬರದ ನಡುವೆಯೇ ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ ಸಾವಿನ ಸುದ್ದಿ ಬೆಳಕಿಗೆ ಬಂದಿದೆ. ಎಚ್3ಎನ್2 ವೈರಸ್‌ನಿಂದಾಗಿ ದೇಶದಲ್ಲಿ ಇದುವರೆಗೆ ಮೂವರು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ವೈದ್ಯರ ಪ್ರಕಾರ ಇನ್‌ಫ್ಲೂಯೆಂಜಾ ವೈರಸ್ ಜ್ವರ, ಶೀತ ಮತ್ತು ಮೈಕೈ ನೋವಿನಂತಹ ರೋಗಲಕ್ಷಣಗಳನ್ನು ಪ್ರಚೋದಿಸುತ್ತದೆ. ಕೆಲವು ಸಂದರ್ಭಗಳಲ್ಲಿ ನಿರಂತರ ಕೆಮ್ಮನ್ನು ಉಂಟುಮಾಡುತ್ತದೆ. ಇದು ರೋಗಿಗಳನ್ನು ತುಂಬಾ ದುರ್ಬಲಗೊಳಿಸುತ್ತದೆ. ಭಾರತದಲ್ಲಿ ಫ್ಲೂ ಪ್ರಕರಣಗಳ ಹೆಚ್ಚಳದ ಹಿಂದೆ ಎರಡು ಇನ್‌ಫ್ಯೂಯೆಂಜಾ ‘ಎ’ ಮಾದರಿಯ ತಳಿಗಳು ಇವೆ. H1N1 ನಂತರ H3N2 ಜ್ವರದ ಪ್ರಬಲ ಉಪವಿಭಾಗವಾಗಿ ಹೊರಹೊಮ್ಮಿದೆ.
ವರದಿಗಳ ಪ್ರಕಾರ ಸೋಂಕಿತ 23 ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿದ್ದು, ಇದು ವೈರಸ್‌ನಿಂದ ಸಂಭವಿಸಿದ ಮೂರನೇ ಸಾವು. ಖಾಸಗಿ ವಿದ್ಯಾಸಂಸ್ಥೆಯೊಂದರ ವಿದ್ಯಾರ್ಥಿಗೆ ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದಾಗ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆತನ ರಕ್ತದಲ್ಲಿ ಎಚ್3ಎನ್2 ವೈರಸ್‌ನ ಕುರುಹುಗಳು ಕಂಡುಬಂದಿವೆ.